ಮೋದಿಯನ್ನು ಲಘುವಾಗಿ ಪರಿಗಣಿಸಿಲ್ಲ: ಪ್ರಧಾನಿ
ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಪ್ರಧಾನಮಂತ್ರಿ...
ನವದೆಹಲಿ: ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಇಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ವೇಳೆ ಪ್ರಧಾನಿ ಅವರು ಈ ರೀತಿ ಹೇಳಿದ್ದು, ವಿರೋಧ ಪಕ್ಷಗಳ ಶಕ್ತಿಯನ್ನು ನಾವು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನರೇಂದ್ರ ಮೋದಿ ಅವರು ಕಾಂಗ್ರೆಸ್ಗೆ ಸವಾಲಾಗಿದ್ದಾರೆ. ರಾಜಕೀಯ ಹಿತದೃಷ್ಟಿಯಿಂದ ನೋಡುವುದಾದರೆ ಕಾಂಗ್ರೆಸ್ಗೆ ಇದೊಂದು ದೊಡ್ಡ ಸವಾಲು ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಆದ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆತ್ಮ ವಿಶ್ವಾಸದಿಂದ ಸ್ಫರ್ಧಿಸಲಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಸಲುವಾಗಿ ಕಾಂಗ್ರೆಸ್ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆಯನ್ನು ತಳ್ಳಿಹಾಕಿದ ಪ್ರಧಾನಿ ಸಿಂಗ್, ಗಲಭೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಇದಾಗಿದೆ. ಇಂತಹ ಕಾಯ್ದೆಗಳನ್ನು ಜಾರಿಗೊಳಿಸಿದಾಕ್ಷಣ ಗಲಭೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ನಾವು ಹೇಳುತ್ತಿಲ್ಲ. ಆದರೆ ಗಲಭೆಗೊಳಗಾದ ನಿರಾಶ್ರಿತರಿಗೆ ಸೂಕ್ತ ಪರಿಹಾರ ಸಿಗಬೇಕು ಎಂಬುದು ಸರ್ಕಾರದ ಆಶೆಯಾಗಿದೆ ಎಂದಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಕೆಲ ರಾಜ್ಯಗಳಲ್ಲಿ ಕೋಮುಗಲಭೆಗಳು ನಡೆದಿರುವುದು ವರದಿಯಾಗಿದೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಈ ನಿರ್ಣಯಕ್ಕೆ ಬರಲಾಗಿದೆ ವಿನಾಃ ಯಾವುದೇ ವೋಟ್ ಬ್ಯಾಂಕ್ಗಾಗಿ ಅಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.