ಸಂಜಯ್ ದತ್ಗೆ ಮತ್ತೆ 30 ದಿನ ಪೆರೋಲ್
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ಗೆ ಪುಣೆಯ...
ಪುಣೆ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ಗೆ ಪುಣೆಯ ವಿಭಾಗೀಯ ಆಯುಕ್ತರು ಶುಕ್ರವಾರ ಮತ್ತೆ 30 ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದ್ದಾರೆ.
ಸಂಜಯ್ ದತ್ ಅವರ ಪತ್ನಿ ಮಾನ್ಯತಾ ಅವರಿಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ ತನಗೆ ಪೆರೋಲ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ಪರಿಶೀಲಿಸಿದ ಪುಣೆ ವಿಭಾಗೀಯ ಆಯುಕ್ತರು ಸಂಜಯ್ಗೆ ಪೆರೋಲ್ ನೀಡಿದ್ದಾರೆ. ಸದ್ಯ ಪುಣೆಯ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದತ್ಗೆ ಪುನಃ 1 ತಿಂಗಳ ಕಾಲ ಪೆರೋಲ್ ದೊರಕ್ಕಿದ್ದು, ಸಂಜಯ್ ದತ್ ಅವರಿಗೆ ಮನೆಗೆ ತೆರಳಲಿದ್ದಾರೆ.
ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅ. 1ರಂದು ಸಂಜಯ್ ಅವರಿಗೆ ಯರವಾಡ ಜೈಲು ಅಧಿಕಾರಿಗಳು 14 ದಿನಗಳ ಪೆರೋಲ್ ನೀಡಿದ್ದರು. ಆದರೆ ಕಾಲಿನ ಗಾಯ ವಾಸಿಯಾಗದ ಹಿನ್ನೆಲೆಯಲ್ಲಿ ಅ. 14ರಂದು ಮತ್ತೆ 14 ದಿನಗಳ ಕಾಲ ಪೆರೋಲ್ ಅವದಿಯನ್ನು ಅಧಿಕಾರಿಗಳು ವಿಸ್ತರಿಸಿದ್ದರು.
ಭಾರತೀಯ ದಂಡ ಸಂಹಿತೆ ಅನ್ವಯ ಪ್ರತಿಯೊಬ್ಬ ಕೈದಿಗೂ ವರ್ಷದಲ್ಲಿ ಇಂತಿಷ್ಟು ದಿನ ಪೆರೋಲ್ ಮೂಲಕ ರಜೆ ನೀಡಲಾಗುತ್ತದೆ. ಕೆಲವೊಂದು ವಿಶೇಷ ಕಾರಣಗಳಿಂದಾಗಿ ಅಥವಾ ಸಂದರ್ಭಕ್ಕನುಗುಣವಾಗಿ ಪೆರೋಲ್ ನೀಡುವ ಪದ್ದತಿಯಿದೆ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಮಾರ್ಚ್ನಲ್ಲಿ ಸಂಜಯ್ ದತ್ಗೆ ಟಾಡಾ ಕೋರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು.