ಸಕ್ಕರೆ ಕಾರ್ಖಾನೆಗಳಿಗೆ ಬಡ್ಡಿ ರಹಿತ ಸಾಲ: ಶರದ್ ಪವಾರ್
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವ ಸಂಬಂಧ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಅಗ್ಗ ಜಗ್ಗಾಟಕ್ಕೆ ತೆರೆಬಿದ್ದಿದೆ...
ನವದೆಹಲಿ: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವ ಸಂಬಂಧ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಅಗ್ಗ ಜಗ್ಗಾಟಕ್ಕೆ ತೆರೆಬಿದ್ದಿದೆ.
ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳಿಗೆ ಸ್ಪಂಧಿಸಿರುವ ಕೇಂದ್ರ ಸರ್ಕಾರ, ಸಕ್ಕರೆ ಕಾರ್ಖಾನೆಗಳಿಗೆ ಸುಮಾರು 7200 ಕೋಟಿ ಪ್ಯಾಕೇಜ್ ಅನ್ನು ಘೋಷಿಸಿದೆ. ಕೃಷಿ ಭವನದಲ್ಲಿ ನಡೆದ ಕೇಂದ್ರ ಸಚಿವರ ಉನ್ನತಾಧಿಕಾರಿಗಳ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಗಳನ್ನು ಹೆಚ್ಚು ಸದೃಡಗೊಳಿಸುವ ಆಶೆಯವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಇದಕ್ಕಾಗಿ ಸುಮಾರು 7200 ಕೋಟಿಯಷ್ಟು ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಈ ಹಣವನ್ನು ಕಾರ್ಖಾನಗಳಿಗೆ ಬಡ್ಡಿ ರಹಿತ ಸಾಲವಾಗಿ ನೀಡಲಾಗುವುದು. ಅಲ್ಲದೆ ಕಚ್ಚಾ ಸಕ್ಕರೆಗು ಸಹ ಪ್ರೋತ್ಸಾಹ ಧನ ನೀಡಲು ಕೇಂದ್ರ ನಿರ್ಧರಿಸಿದೆ ಎಂದು ಪವಾರ್ ತಿಳಿಸಿದ್ದಾರೆ.
ಕಾರ್ಖಾನೆಗಳನ್ನು ಆರ್ಥಿಕವಾಗಿ ಸಮರ್ಥಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಆರ್ಥಿಕವಾಗಿ ಕಾರ್ಖಾನೆಗಳು ಹೆಚ್ಚು ಸದೃಡಗೊಂಡರೆ ಮಾತ್ರ ಕಾರ್ಖಾನೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಬ್ಯಾಂಕುಗಳಲ್ಲಿ ಕಾರ್ಖಾನೆಗಳು ಪಡೆಯುವ ಸಾಲಕ್ಕೆ ಸರ್ಕಾರವೇ ಬಡ್ಡಿಯನ್ನು ಕಟ್ಟುತ್ತದೆ. ಹೀಗಾಗಿ ಬಡ್ಡಿ ರಹಿತ ಸಾಲ ಪಡೆದ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಹೆಚ್ಚಿನ ಬೆಲೆ ನೀಡಬೇಕು ಎಂದು ಹೇಳಿದ್ದಾರೆ.
ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂಬ ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 2650 ರುಪಾಯಿ ಬೆಂಬಲ ಬೆಲೆಯನ್ನು ಘೋಷಿಸಿತ್ತು. ಇದನ್ನು ಸಕ್ಕರೆ ಕಾರ್ಖಾನೆಗಳು ತೀವ್ರವಾಗಿ ವಿರೋಧಿಸಿದ್ದವು. ಹೀಗಾಗಿ ಈ ಸಮಸ್ಯೆಯ ಪರಿಹಾರಕ್ಕೆ ಮುಂದಾಗುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು.