'ಸೆಕ್ಸಿ' ಹೇಳಿಕೆ: ಕ್ಷಮೆಯಾಚಿಸಿದ ಫಾರುಖ್
ವಿವಾದಾತ್ಮಕ 'ಸೆಕ್ಸಿ' ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಫಾರುಖ್ ಅಬ್ದುಲ್ಲಾ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ನವದೆಹಲಿ: ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ 'ಸೆಕ್ಸಿ' ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಫಾರುಖ್ ಅಬ್ದುಲ್ಲಾ ಅವರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಯುವತಿಯರ ಜತೆ ಮಾತನಾಡಲು ಭಯವಾಗುತ್ತೆ. ಹೀಗಾಗಿ ನಾನು ಮಹಿಳಾ ಕಾರ್ಯದರ್ಶಿಯನ್ನು ನೇಮಸಿಕೊಳ್ಳುವ ಬಗ್ಗೆ ವಿಚಾರ ಮಾಡಿಲ್ಲ ಎಂದು ಫಾರುಖ್ ಅಬ್ದುಲ್ಲಾ ಹೇಳಿದ್ದರು.
ಫಾರುಖ್ ಅವರ ಈ 'ಸೆಕ್ಸಿ' ಹೇಳಿಕೆಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು, ಪ್ರಮುಖವಾಗಿ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ, 'ಅದು ಆ ರೀತಿ ಅಲ್ಲ. ಜಸ್ಟ್ ತಮಾಷೆ ಮಾಡಿದ್ದಾರೆ ಅಷ್ಟೆ. ಆದರೂ ಅವರಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ' ಎಂದಿದ್ದರು.
ಇಂದು ಸ್ವತಹ ಫಾರುಖ್ ಅಬ್ದುಲ್ಲಾ ಅವರ ಪುತ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೇ ತಮ್ಮ ತಂದೆಯ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿವಾದಾತ್ಮಕ ಹೇಳಿಕೆ ನೀಡಿದ ತಮ್ಮ ತಂದೆ ಕ್ಷಮೆಯಾಚಿಸಬೇಕು ಎಂದಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಫಾರುಖ್ ಅಬ್ದುಲ್ಲಾ ಕ್ಷಮೆಯಾಚಿಸಿದ್ದಾರೆ.
'ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ' ಎಂದು ಫಾರುಖ್ ಹೇಳಿದ್ದಾರೆ.