ತೇಜ್ಪಾಲ್ ಪೊಲೀಸ್ ಕಸ್ಟಡಿ 4 ದಿನ ವಿಸ್ತರಣೆ
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸರ ವಶದಲ್ಲಿರುವ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ...
ಪಣಜಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸರ ವಶದಲ್ಲಿರುವ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್‌ರ ಪೊಲೀಸ್ ಕಸ್ಟಡಿಯ ಅವಧಿಯನ್ನು ಕೋರ್ಟ್ ಶನಿವಾರ 4 ದಿನಗಳ ಕಾಲ ವಿಸ್ತರಿಸಿದೆ.
ಪೊಲೀಸರ ವಶದಲ್ಲಿದ್ದ ತೇಜ್ಪಾಲ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಂದು ಗೋವಾ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಪೊಲೀಸರು ತೇಜ್ಪಾಲ್‌ರನ್ನು ಹಾಜರುಪಡಿಸಿದರು. ಈ ವೇಳೆ, ಪ್ರಕರಣ ಸಂಬಂಧ ತೇಜ್ಪಾಲ್‌ರನ್ನು ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿರುವುದರಿಂದ ಅವರ ಪೊಲೀಸ್ ಕಸ್ಟಡಿ ಅಧಿಯನ್ನು ವಿಸ್ತರಿಸುವಂತೆ ಪೊಲೀಸರು ಕೋರ್ಟ್‌ಗೆ ಮನವಿ ಸಲ್ಲಿಸಿದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ತೇಜ್ಪಾಲ್‌ರ ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನು 4 ದಿನಗಳಿಗೆ ವಿಸ್ತರಿಸಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಳೆದ ಶನಿವಾರ ರಾತ್ರಿ ತೇಜ್ಪಾಲ್‌ರನ್ನು ವಶಕ್ಕೆ ತೆಗೆದುಕೊಂಡಿದ್ದ ಗೋವಾ ಪೊಲೀಸರು ಭಾನುವಾರ ಬೆಳಗ್ಗೆ ಮ್ಯಾಜಿಸ್ಟ್ರೇಟರ್ ಎದುರ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರಾದ ಶಮಾ ಜೋಶಿ ಅವರು ತೇಜ್ಪಾಲರನ್ನು 6 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು.
ಗೋವಾದ ಪಂಚತಾರ ಹೊಟೇಲೊಂದರಲ್ಲಿ ಆಯೋಜಿಸಲಾಗಿದ್ದ ತೆಹಲ್ಕಾ ಪತ್ರಿಕೆಯ ಕಾರ್ಯಕ್ರಮದ ವೇಳೆ ಕಿರಿಯ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ತೇಜ್ಪಾಲ್ ಎದುರಿಸುತ್ತಿದ್ದಾರೆ.