ಕೇಜ್ರಿವಾಲ್ ಜಯ ಸಂತಸ ತಂದಿದೆ: ಅಣ್ಣಾ ಹಜಾರೆ
ನವದೆಹಲಿ: ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಜಯದಿಂದ ತುಂಬಾ ಸಂತೋಷವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಭಾನುವಾರ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಇಚ್ಛೆಗೆ ವಿರುದ್ಧವಾಗಿ ರಾಜಕೀಯ ಪಕ್ಷ ಕಟ್ಟಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮೇಲೆ ಕೆಂಡ ಕಾರುತ್ತಿದ್ದ ಅಣ್ಣಾ ಹಜಾರೆ ಅವರು ಕಡೆಗೂ ಕೇಜ್ರಿವಾಲ್ ಅವರಿಗೆ ಆರ್ಶಿವರಿಸಿದ್ದಾರೆ. ಆಮ್ ಆದ್ಮಿ ಪಕ್ಷ ಜಯದಿಂದ ತುಂಬಾ ಸಂತೋಷವಾಗಿದೆ ಎಂದು ಮನತುಂಬಿ ಹೇಳಿದ್ದಾರೆ. 15 ವರ್ಷಗಳ ಕಾಲ ಆಡಳಿತ ನೀಡಿದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿರುವ ಎಎಪಿ 70ರಲ್ಲಿ 27 ಸ್ಥಾನಗಳನ್ನು ಪಡೆಯಲಿರುವ ಪಕ್ಷವನ್ನು ಅಭಿನಂದಿಸಿದ್ದಾರೆ.
ಇದೇ ವೇಳೆ ಕಿವಿಮಾತು ಹೇಳಿದ ಅಣ್ಣಾ ಹಜಾರೆ ಅವರು, ಇದು ಕೇಜ್ರಿವಾಲ್ ಅವರಿಗೆ ಸಿಕ್ಕ ಸಂಪೂರ್ಣ ಜಯವಲ್ಲ. ಅರವಿಂದ್ ಅವರಿಗೆ ಜನರು ಸಂಪೂರ್ಣವಾಗಿ ಬೆಂಬಲಿಸಿಲ್ಲ. ಒಂದು ವೇಳೆ ಅಧಿಕಾರ ಗಳಿಸಬೇಕಾದರೆ ಯಾವುದಾದರೊಂದು ಪಕ್ಷದ ಜೊತೆ ಕೈಜೋಡಿಸಬೇಕಿದೆ. ಇದರಿಂದ ಭ್ರಷ್ಟಚಾರ ಹೆಚ್ಚುತ್ತದೆ ಎಂದಿದ್ದಾರೆ. ಭ್ರಷ್ಟಚಾರ ವಿರುದ್ಧ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಹೋರಾಟಕ್ಕೆ ಎಂದು ಜಯ ಸಿಗುವುದಿಲ್ಲ ಎಂದು ವಿಷಾದಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಏರದಿದ್ದರು ಚಿಂತೆಯಿಲ್ಲ. ಆದರೆ ಯಾರೊಂದಿಗೂ ಕೈಜೋಡಿಸಬಾರದು. ವಿಧಾನಸಭೆ ಅತಂತ್ರವಾಗಿ ಮತ್ತೆ ಚುನಾವಣೆ ಘೋಷಣೆಯಾದರೂ ಚಿಂತೆಯಿಲ್ಲ. ಅನೈತಿಕ ಮೈತ್ರಿಯನ್ನು ಯಾವ ಪಕ್ಷದೊಂದಿಗೂ ಮಾಡಬಾರದು. ಎಎಪಿ ಮತ್ತೆ ಚುನಾವಣೆ ಎದುರಿಸಲಿ ಮತ್ತು ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ಅಣ್ಣಾ ಅರವಿಂದ್ಗೆ ಕಿವಿಮಾತು ಹೇಳಿದ್ದಾರೆ.