ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಸುವರ್ಣ ನಿಧನ
ಖ್ಯಾತ ಕನ್ನಡ ಚಲನಚಿತ್ರ ಛಾಯಾಗ್ರಾಹಕ, ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸುಂದರ್‌ನಾಥ್ ಸುವರ್ಣ ಮಂಗಳವಾರ ನಿಧನರಾಗಿದ್ದಾರೆ.
ಬೆಂಗಳೂರು: ಖ್ಯಾತ ಕನ್ನಡ ಚಲನಚಿತ್ರ ಛಾಯಾಗ್ರಾಹಕ, ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸುಂದರ್‌ನಾಥ್ ಸುವರ್ಣ ಅವರು ಮಂಗಳವಾರ ನಿಧನರಾಗಿದ್ದಾರೆ.
ಕೆಲ ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಂದರ್‌ನಾಥ್ ಸುವರ್ಣ ಅವರು ಇಂದು ಬೆಳಗ್ಗೆ ಬೆಂಗಳೂರಿನ ಹನುಮಂತನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ನಮ್ಮೂರ ಮಂದಾರ ಹೂವೇ, ಕಿಲಾಡಿ ತಾತ, ಟೈಗರ್, ಲಾಕಪ್ ಡೆತ್, ಮುಸ್ಸಂಜೆ ಮಾತು, ಅನಭವ, ಗಂಗು ಹಾಗೂ ಕಳ್ಳರ ಸಂತೆ ಸೇರಿದಂತೆ ಸುಮಾರು 164 ಕ್ಕು ಹೆಚ್ಚು ಚಿತ್ರಗಳಲ್ಲಿ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ಕಳ್ಳರ ಸಂತೆ ಚಿತ್ರಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು.
ಹಿರಿಯ ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸುವರ್ಣ ಅವರ ನಿವಾಸಕ್ಕೆ ತೆರಳಿ 'ಸುಂದರ ಪ್ರತಿಭೆ'ಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ.