8 ಮಹಿಳೆಯರ ಜೊತೆ ದೈಹಿಕ ಸಂಬಂಧ: ನಾರಾಯಣ ಸಾಯಿ ತಪ್ಪೊಪ್ಪಿಗೆ
ಸೂರತ್: ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಧಾರ್ಮಿಕ ಗುರು ಅಸಾರಾಂ ಬಾಪು ಅವರ ಪುತ್ರ ನಾರಾಯಣ ಸಾಯಿ 8 ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಗುಜರಾತ್ ಪೊಲೀಸರ ನಡೆಸುತ್ತಿರುವ ವಿಚಾರಣೆ ವೇಳೆ ನಾರಾಯಣ ಸಾಯಿ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ 16 ವರ್ಷದ ಬಾಲಕಿಯ ಜೊತೆಯು ದೈಹಿಕ ಸಂಪರ್ಕ ಹೊಂದಿದ್ದೇನೆ ಎಂದು ಸಾಯಿ ಒಪ್ಪಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ.
ಆದರೆ ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿರುವ ನಾರಾಯಣ ಸಾಯಿ, ಆ ಬಾಲಕಿಯ ಸಮ್ಮತಿ ಮೇರೆಗೆ ದೈಹಿಕ ಸಂಬಂಧ ಹೊಂದಿದ್ದೇನೆ ಹೊರತು, ಅತ್ಯಾಚಾರವೆಸಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ.
ಜೋಧ್ ಪುರದಲ್ಲಿ ಅಸಾರಾಮ್ ಟ್ರಸ್ಟ್ ನಡೆಸುತ್ತಿರುವ ಹಾಸ್ಟೆಲ್ ನಲ್ಲಿರುವ 15 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಧಾರ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು. ರಾಜಸ್ಥಾನದಲ್ಲಿ ಜೀವ ಭಯವಿದ್ದುದ್ದರಿಂದ ಇಲ್ಲಿಗೆ ಬರಬೇಕಾಯಿತು ಎಂದು ಆಕೆಯ ತಂದೆ ಹೇಳಿದ್ದರು. ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಪ್ರಕರಣವನ್ನು ರಾಜಸ್ಥಾನಕ್ಕೆ ವರ್ಗಾಯಿಸಿದ್ದರು.
ಕಳೆದ ಹಲವಾರು ದಿನಗಳಿಂದ ತಲೆಮರೆಸಿಕೊಂಡಿದ್ದ ನಾರಾಯಣ ಸಾಯಿಯನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿದ್ದರು.