ತೇಜ್ಪಾಲ್‌ಗೆ 12 ದಿನ ನ್ಯಾಯಾಂಗ ಬಂಧನ
ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ತೆಹೆಲ್ಕಾ ಮಾಜಿ ..
ಪಣಜಿ: ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ತೆಹೆಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಅವರಿಗೆ ಪಣಜಿ ಕೋರ್ಟ್ 12 ದಿನಗಳ ನ್ಯಾಯಾಂಗ ಬಂಧನಕ್ಕೆ ಬುಧವಾರ ಆದೇಶಿಸಿದೆ.
ತೇಜ್ಪಾಲ್ ಅವರ 10ದಿನಗಳ ಪೊಲೀಸ್ ಬಂಧನದ ಅವಧಿ ಇಂದಿಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಯನ್ನು ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕ್ಷಮಾ ಜೋಶಿ ಅವರು, ತೇಜ್ಪಾಲ್‌ಗೆ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.
ಗೋವಾದ ಪಂಚತಾರ ಹೊಟೇಲೊಂದರಲ್ಲಿ ಆಯೋಜಿಸಲಾಗಿದ್ದ ತೆಹಲ್ಕಾ ಪತ್ರಿಕೆಯ ಕಾರ್ಯಕ್ರಮದ ವೇಳೆ ಕಿರಿಯ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಳೆದ ನವೆಂಬರ್ 30ರಂದು ತೇಜ್ಪಾಲ್‌ರನ್ನು ಗೋವಾ ಪೊಲೀಸರು ಬಂಧಿಸಿದ್ದರು.