ಬದಲಾವಣೆ ಇಲ್ಲದ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೊಳಿಸಿ: ಎಎಪಿ
ರಾಲೇಗಾಂವ್ ಸಿದ್ಧಿ: ಬದಲಾವಣೆ ಮಾಡದೆ ಅಣ್ಣಾ ಹಜಾರೆ ಅವರ ಪ್ರಬಲ ಲೋಕಪಾಲ್ ಮಸೂದೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಶುಕ್ರವಾರ ಆಗ್ರಹಿಸಿದೆ.
ಸಾಮಾಜಿಕ ಕಾರ್ಯಕರ್ತ ಅಣ್ಮಾ ಹಜಾರೆ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅವರನ್ನು ಭೇಟಿ ಮಾಡಿದ ನಂತರ ಎಎಪಿ ನಾಯಕ ಕುಮಾರ್ ವಿಶ್ವಾಸ್ ಅವರು ಪ್ರಬಲ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿದ್ದಾರೆ.
ಗಾಂಧಿವಾಧಿ ಹಜಾರೆ ಅವರ ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿಗೊಳಿಸಬೇಕೆ ಹೊರತು, ಕೇಂದ್ರ ಸರ್ಕಾರ ಬದಲಾವಣೆ ತಂದಿರುವ ಲೋಕಪಾಲ್ ಮಸೂದೆಯನ್ನಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಮಸೂದೆಯಲ್ಲಿ ಯಾವುದೇ ಬದಲಾವಣೆ ತರದೆ, ಜನರನ್ನು ವಂಚಿಸದೇ ಮಸೂದೆ ಮಂಡನೆ ಮಾಡಬೇಕು. ಪ್ರಬಲ ಲೋಕಪಾಲ್ ಮಸೂದೆ ಜಾರಿಗಾಗಿ ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಜಂತರ್ ಮಂತರ್‌ನಲ್ಲಿ ಕೈಗೊಂಡಿದ್ದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರ ಸ್ಥಳಕ್ಕೆ ಭೇಟಿ ನೀಡಿ, ತಮ್ಮ ಬೇಡಿಕೆಗೆ ಒಪ್ಪಿಗೆ ಸೂಚಿಸಿದಂತೆಯೇ ಮಸೂದೆಯನ್ನು ಮಂಡಿಸಬೇಕು. ಇದರಲ್ಲಿ ಯಾವುದೇ ಬದಲಾವಣೆಗೆ ನಾವು ಸಮ್ಮತಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.