ಸಲಿಂಗಾಪರಾಧ: ಸುಪ್ರೀಂ ತೀರ್ಪಿಗೆ ಚಿದು ಅಸಮಾಧಾನ
ಸಲಿಂಗಿಗಳ ನಡುವಿನ ಸಮ್ಮತಿಯ ಸೆಕ್ಸ್ ಅಪರಾಧ ಎಂದು ನಿನ್ನೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಸಲಿಂಗಿಗಳ ನಡುವಿನ ಸಮ್ಮತಿಯ ಸೆಕ್ಸ್ ಅಪರಾಧ ಎಂದು ನಿನ್ನೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಸುಪ್ರೀಂ ತೀರ್ಪಿನ ಬಗ್ಗೆ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿರುವ ಚಿದು, ಕೋರ್ಟ್ ತೀರ್ಪಿನ ಬಗ್ಗೆ ನನಗೆ ತೀವ್ರ ಅಸಮಾಧಾನ ಇದೆ. ಸುಪ್ರೀಂ ಕೋರ್ಟ್ ತೀರ್ಪು ನಮ್ಮನ್ನು ಮತ್ತೆ 1860ಕ್ಕೆ ಕರೆದುಕೊಂಡು ಹೋಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಸಹ ಚಿದಂಬರಂ ತಿಳಿಸಿದ್ದಾರೆ.
ಸಮ್ಮತಿಯ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ ದೆಹಲಿ ಹೈಕೋರ್ಟ್ 2009ರಲ್ಲಿ ನೀಡಿದ್ದ ತೀರ್ಪನ್ನು ತಳ್ಳಿಹಾಕಿದ ನ್ಯಾ. ಜಿ.ಎಸ್. ಸಿಂಘ್ವಿ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಅವರಿದ್ದ ಸುಪ್ರೀಂ ಪೀಠ, ಸಲಿಂಗಕಾಮ ಅಪರಾಧ ಎಂದು ಬುಧವಾರ ತೀರ್ಪು ನೀಡಿತ್ತು. ಅಲ್ಲದೆ ಈ ಅಪರಾಧಕ್ಕಾಗಿ ಜೀವಾವಧಿ ವರೆಗೆ ಶಿಕ್ಷೆ ವಿಧಿಸಬಹುದು ಎಂದು ಹೇಳಿದೆ.