ಮೇವು ಹಗರಣ: ಸುಪ್ರೀಂನಿಂದ ಲಾಲುಗೆ ಜಾಮೀನು
ಬಹುಕೋಟಿ ಮೇವು ಖರೀದಿ ಹಗರಣ ಸಂಬಂಧ ಜೈಲು ಪಾಲಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಜಾಮೀನು ..
ನವದೆಹಲಿ: ಬಹುಕೋಟಿ ಮೇವು ಖರೀದಿ ಹಗರಣ ಸಂಬಂಧ ಜೈಲು ಪಾಲಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಮೇವು ಹಗರಣ ಸಂಬಂಧ ರಾಂಚಿ ಸಿಬಿಐ ಕೋರ್ಟ್ ಲಾಲುಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಸಿಬಿಐ ಕೋರ್ಟ್ ತೀರ್ಪು ಪ್ರಶ್ನಿಸಿ ಲಾಲು ಜಾರ್ಖಂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಜಾಮೀನು ನೀಡುವಂತೆಯೂ ಮನವಿ ಮಾಡಿದ್ದರು. ಆದರೆ ಪ್ರಕರಣದಲ್ಲಿ 37 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ, ಲಾಲು ಸೇರಿದಂತೆ ಇತರೆ ಆರು ಮಂದಿ ತಪ್ಪಿತಸ್ಥರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಲಾಲು ಪರ ವಕೀಲ ರಾಮ್ ಜೇಠ್ಮಲಾನಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇಂದು ಲಾಲು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಪ್ರಕರಣದ ಇತರೆ ಅಪರಾಧಿಗಳಿಗೆ ನೀಡಲಾಗಿರುವ ಜಾಮೀನಿನ ಆಧಾರದ ಮೇಲೆಯೇ ಲಾಲುಗೂ ಜಾಮೀನು ಮಂಜೂರು ಮಾಡಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪುನ್ನು ಆರ್‌ಜೆಡಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಸ್ವಾಗತಿಸಿವೆ.
'ಲಾಲು ಜೀ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ. ಸುಪ್ರೀಂನ ಈ ಕ್ರಮವನ್ನು ತಾವು ಸ್ವಾಗತಿಸುವುದಾಗಿ' ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ತಿಳಿಸಿದ್ದಾರೆ.
'ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪುನ್ನು ತಾವು ಸ್ವಾಗತಿಸುವುದಾಗಿ' ಲಾಲು ಅವರ ಪತ್ನಿ, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ಹೇಳಿದ್ದಾರೆ.
ಬಹುಕೋಟಿ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಸೇರಿದಂತೆ ಒಟ್ಟು 44 ಮಂದಿ ತಪ್ಪಿತಸ್ಥರು ಎಂದು ರಾಂಚಿ ಸಿಬಿಐ ಕೋರ್ಟ್ ಕಳೆದ ಸೆಪ್ಟೆಂಬರ್ 30ರಂದು ತೀರ್ಪು ನೀಡಿತ್ತು.