ವೀಸಾ ವಂಚನೆ: ಭಾರತೀಯ ಉಪ ರಾಯಭಾರಿಯ ಬಂಧನ, ಬಿಡುಗಡೆ
ನ್ಯೂಯಾರ್ಕ್: ವೀಸಾ ವಂಚನೆ ಆರೋಪದ ಮೇಲೆ ಭಾರತೀಯ ರಾಯಭಾರಿಯನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.
ವೀಸಾದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಅಮೆರಿಕದಲ್ಲಿರುವ ಭಾರತೀಯ ಉಪ ರಾಯಭಾರಿ ದೇವಯಾನಿ ಕೋಬ್ರಾಗಡೆ ಅವರನ್ನು ಗುರುವಾರ ಬೆಳಗ್ಗೆ ಅಮೆರಿಕ ಅಧಿಕಾರಿಗಳು ಬಂಧಿಸಿ, ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು 25 ಸಾವಿರ ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಿದೆ.
ತಮ್ಮ ಮಗಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ವೇಳೆ ಅಧಿಕಾರಿಗಳು ದೇವಾಯಾನಿಯನ್ನು ರಸ್ತೆಯಲ್ಲೇ ಏಕಾಏಕಿ ಬಂಧಿಸಿ, ಕರೆದೊಯ್ದಿದ್ದರು. ನ್ಯೂಯಾರ್ಕ್‌ನ ಫೆಡರಲ್ ಪ್ರಾಸಿಕ್ಯೂಟರ್ ಭಾರತೀಯ ಮೂಲದ ಪ್ರೀತ್ ಬರಾರ್ ಆದೇಶದ ಮೇರಗೆ ದೇವಯಾನಿಯನ್ನು ಬಂಧಿಸಲಾಗಿತ್ತು.
ದೇವಯಾನಿ ಅವರು ತಮ್ಮ ಮನೆ ಕೆಲಸದಾಕೆಗೆ ತಿಂಗಳಿಗೆ 537 ಡಾಲರ್ ಸಂಬಳ ನೀಡುತ್ತಿದ್ದಾರೆ. ಆದರೆ ಅವರು ವೀಸಾ ಅರ್ಜಿಯಲ್ಲಿ 4500ಡಾರಲ್ ಸಂಬಳ ನೀಡುತ್ತಿರುವುದಾಗಿ ತಪ್ಪುಮಾಹಿತಿ ನೀಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.