ನಾಳೆ ರಾಜ್ಯಸಭೆಯಲ್ಲಿ ಲೋಕಪಾಲ್ ಮಸೂದೆ ಜಾರಿ: ಕಾಂಗ್ರೆಸ್
ನಾಳೆ ರಾಜ್ಯಸಭೆಯಲ್ಲಿ ಜನ ಲೋಕಪಾಲ್ ಮಸೂದೆ ಜಾರಿಯಾಗಲಿದೆ ಎಂದು ಕಾಂಗ್ರೆಸ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದೆ...
ಚೆನ್ನೈ: ನಾಳೆ ರಾಜ್ಯಸಭೆಯಲ್ಲಿ ಜನ ಲೋಕಪಾಲ್ ಮಸೂದೆ ಜಾರಿಯಾಗಲಿದೆ ಎಂದು ಕಾಂಗ್ರೆಸ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದೆ.
ಯಾವುದೇ ಚರ್ಚೆ ಇಲ್ಲದೇ ಮಸೂದೆ ಜಾರಿಗೆ ಭಾರತೀಯ ಜನತಾ ಪಕ್ಷ ಬೆಂಬಲಿಸಿದರೆ, ನಾಳೆ ಜನ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಬಹುದು ಎಂದು ಕಾಂಗ್ರೆಸ್ ತಿಳಿಸಿದೆ.
ಕೇಂದ್ರ ಸಚಿವ ವಿ ನಾರಾಯಣಸ್ವಾಮಿ ಅವರು ಮಾತನಾಡಿ, ನಾಳೆ ರಾಜ್ಯಸಭೆಯಲ್ಲಿ ಲೋಕಪಾಲ್ ಮಸೂದೆ ಜಾರಿಯಾಗಲಿದೆ. ಇದರ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದೆ. ಮಸೂದೆ ಜಾರಿಗೆ ವಿರೋಧ ಪಕ್ಷಗಳು ಸೇರಿದಂತೆ ಇತರೆ ಪಕ್ಷಗಳ ಸಹಕಾರವು ಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಣ್ಮಾ ಹಜಾರೆ ಅವರು ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ, ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ್ ಮಸೂದೆ ಜಾರಿಗೊಳಿಸಲಾಗುವುದು ಎಂದು ಹೇಳಿತ್ತು. ಶುಕ್ರವಾರವೇ ಲೋಕಪಾಲ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತಾದರೂ ಯಾವುದೇ ಚರ್ಚೆಗೆ ಅವಕಾಶ ಸಿಗದೇ ಕೇವಲ ಗದ್ದಲಕ್ಕಷ್ಟೇ ಸಾಕ್ಷಿಯಾಯಿತು. ಹೀಗಾಗಿ ಲೋಕಪಾಲ ಮಸೂದೆ ಕುರಿತ ಚರ್ಚೆ ಸೋಮವಾರಕ್ಕೆ ಮುಂದೂಡಲಾಯಿತು.
ಲೋಕಪಾಲ್ ಮಸೂದೆಗೆ ಒಪ್ಪಿಗೆ ನೀಡಲು ಸಾಧ್ಯವೇ ಇಲ್ಲ ಎಂದು ಸಮಾಜವಾದಿ ಪಕ್ಷ ಹೇಳಿತ್ತು. ಶುಕ್ರವಾರ ಲೋಕಪಾಲ್ ಮಸೂದೆ ಮಂಡನೆಯಾಗುತ್ತಿದ್ದಂತೆ ಸಮಾಜವಾದಿ ಪಕ್ಷದ ಸದ್ಯಸರು ಗದ್ದಲ ಮಾಡಿದರು.
ಇದಕ್ಕೆ ಅಣ್ಣಾ ಹಜಾರೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.