ಲೋಕಪಾಲ ಮಸೂದೆ ಅಪೂರ್ಣ ಎಂದಾದರೆ ಪ್ರತಿಭಟಿಸಲಿ: ಅಣ್ಣಾ
ಸರ್ಕಾರ ಜಾರಿ ಮಾಡಲು ಉದ್ದೇಶಿಸಿದ ಲೋಕಪಾಲ ಮಸೂದೆಯ ಬಗ್ಗೆ ತಾನು ತೃಪ್ತಿಹೊಂದಿದ್ದು, ನಾವು ಹೇಳಿದ ಹೆಚ್ಚಿನ ಬೇಡಿಕೆಗಳನ್ನು...
ರಾಳೇಗಣ್ಸಿದ್ಧಿ: ಸರ್ಕಾರ ಜಾರಿ ಮಾಡಲು ಉದ್ದೇಶಿಸಿದ ಲೋಕಪಾಲ ಮಸೂದೆಯ ಬಗ್ಗೆ ತಾನು ತೃಪ್ತಿಹೊಂದಿದ್ದು, ನಾವು ಹೇಳಿದ ಹೆಚ್ಚಿನ ಬೇಡಿಕೆಗಳನ್ನು ಅದರಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.
ಅದೇ ವೇಳೆ ಸರ್ಕಾರದ ಲೋಕಪಾಲ ಮಸೂದೆ ಅಪೂರ್ಣ ಅದನ್ನು ನಾವು ಬೆಂಬಲಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ನೇತಾರ ಕೇಜ್ರಿವಾಲ್ ಹೇಳಿದ್ದಾರೆ. ಕೇಜ್ರಿವಾಲ್ರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾ, ಪ್ರಸ್ತುತ ಮಸೂದೆ ಬಗ್ಗೆ ಕೇಜ್ರಿವಾಲ್ ಅಸಮಾಧಾನ ಹೊಂದಿದ್ದರೆ ಅದರ ವಿರುದ್ಧ ಪ್ರತಿಭಟನೆ ಮಾಡಲಿ ಎಂದಿದ್ದಾರೆ.
ಅಣ್ಣಾ ಹಜಾರೆಯವರ ತವರೂರಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಣ್ಣಾ, ಸರ್ಕಾರದ ಲೋಕಪಾಲ ಮಸೂದೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ಬೇಡಿಕೆಗಳಲ್ಲಿ ಹೆಚ್ಚಿನವುಗಳನ್ನು ಇಲ್ಲಿ ಪೂರೈಸಲಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಈ ಅಧಿವೇಶನದಲ್ಲೇ ಲೋಕಪಾಲ ಮಸೂದೆ ಜಾರಿ ಮಾಡಬೇಕೆಂದು ಅಣ್ಣಾ ಒತ್ತಾಯಿಸಿದ್ದಾರೆ.
ಸರ್ಕಾರದ ಲೋಕಪಾಲ ಮಸೂದೆ ಬಗ್ಗೆ ಕೇಜ್ರಿವಾಲ್ ಅಸಮಾಧಾನ ಸೂಚಿಸಿರುವ ಬಗ್ಗೆ ಅಣ್ಣಾ ಅವರನ್ನು ಕೇಳಿದಾಗ, ಕೇಜ್ರಿವಾಲ್ ಮತ್ತು ಅವರ ತಂಡಕ್ಕೆ ಲೋಕಪಾಲ ಮಸೂದೆ ಬಗ್ಗೆ ತೃಪ್ತಿ ಇಲ್ಲದೇ ಇದ್ದರೆ ಅವರು ಪ್ರತ್ಯೇಕವಾಗಿಯೇ ಪ್ರತಿಭಟನೆಯನ್ನು ಕೈಗೊಳ್ಳಬಹುದು. ಅವರೇನು ಮಾಡಬೇಕೆಂದು ಅಂದುಕೊಂಡಿದ್ದಾರೋ, ಅವರು ಅದನ್ನು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಅಣ್ಣಾ ಉತ್ತರಿಸಿದ್ದಾರೆ.