ಅಮೆರಿಕ ನಿಯೋಗ ಭೇಟಿ ನಿರಾಕರಿಸಿದ ಮೋದಿ, ರಾಹುಲ್, ಶಿಂದೆ
ಶಿಷ್ಟಾಚಾರ ಉಲ್ಲಂಘಿಸಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯ ಬಂಧನ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ,..
ನವದೆಹಲಿ: ಶಿಷ್ಟಾಚಾರ ಉಲ್ಲಂಘಿಸಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯ ಬಂಧನ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕ ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ. ಈ ಮೂಲಕ ಅಮೆರಿಕದ ದುರ್ವತನೆಗೆ ಭಾರತ ಕಠಿಣ ಸಂದೇಶ ರವಾನಿಸಲು ನಿರ್ಧರಿಸಿದೆ.
ವರದಿಗಳ ಪ್ರಕಾರ, ಅಮೆರಿಕ ಪೊಲೀಸರ ಅಮಾನವೀಯ ವರ್ತನೆಯನ್ನು ಯುಪಿಎ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಯಾವುದೇ ಸಚಿವರು ಅಮೆರಿಕ ಸಂಸದರ ಉಭಯಪಕ್ಷಗಳ ನಿಯೋಗವನ್ನು ಭೇಟಿ ಮಾಡದಂತೆ ಸೂಚಿಸಲಾಗಿದೆ.
ಪ್ರಕರಣ ಸಂಬಂಧ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರು ಈಗಾಗಲೇ ಅಮೆರಿಕದ ಉಭಯ ಪಕ್ಷಗಳ ನಿಯೋಗದ ಭೇಟಿಗೆ ನಿರಾಕರಿಸಿದ್ದಾರೆ.
ಮಹಿಳೆಯೊಬ್ಬರ ಜತೆ ಅಮೆರಿಕ ವರ್ತಿಸಿದ ರೀತಿಗೆ ಸ್ಪೀಕರ್ ತೀವ್ರ ಅಸಮಾಧಾನಗೊಂಡಿದ್ದಾರೆ. ಮಾಜಿ ರಾಯಭಾರಿ ಹಾಗೂ ಮಹಿಳೆಯಾಗಿ ಮೀರಾ ಕುಮಾರ್ ಅಮೆರಿಕಕ್ಕೆ ಸ್ಪಷ್ಟ ಸಂದೇಶವನ್ನೊಂದನ್ನು ಈ ಮೂಲಕ ರವಾನಿಸಲು ಬಯಸಿದ್ದಾರೆ ಎನ್ನುತ್ತವೆ ಸಂಸತ್ತಿನ ಮೂಲಗಳು
ಮೆರಿಕದಲ್ಲಿರುವ ಭಾರತ ರಾಯಭಾರ ಕಚೇರಿಯ ಡೆಪ್ಯುಟಿ ಕೌನ್ಸೆಲರ್ ದೇವಯಾನಿ ಅವರನ್ನು ಶಿಷ್ಟಾಚಾರ ಉಲ್ಲಂಘಿಸಿ ನಡುಬೀದಿಯಲ್ಲಿ ಬಂಧಿಸಿದ್ದಷ್ಟೇ ಅಲ್ಲ ಅವರ ವಿವಸ್ತ್ರಗೊಳಿಸಿ ತಪಾಸಣೆಯನ್ನೂ ನಡೆಸಲಾಗಿತ್ತು! ರಾಯಭಾರ ಕಚೇರಿಯ ಮಹಿಳಾ ಅಧಿಕಾರಿಯ ಜತೆಗಿನ ಪೊಲೀಸರ ಅಮಾನವೀಯ ವರ್ತನೆ ಇಲ್ಲಿಗೇ ನಿಲ್ಲುವುದಿಲ್ಲ. ತಪಾಸಣೆಯ ಬಳಿಕ ದೇವಯಾನಿ ಅವರನ್ನು ಮಾದಕ ವ್ಯಸನಿಗಳ ಸೆಲ್‌ನಲ್ಲಿ ಕೂಡಿಹಾಕಲಾಗಿತ್ತು.
ಇದು ರಾಯಭಾರ ಕಚೇರಿ ಅಧಿಕಾರಿಗಳ ಜತೆಗಿನ ನಡವಳಿಕೆ ಸಂಬಂಧ ರಚಿಸಲಾಗಿರುವ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.