'ಅಣ್ಣಾನಿಂದ ನನ್ನನ್ನು ದೂರ ಸರಿಸಲು ನೂರು ಕೋಟಿ ಹಣ ವ್ಯಯಿಸಿದ್ದರು'
ಅಣ್ಣಾ ಹಜಾರೆ ಮತ್ತು ನನ್ನ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವುದಕ್ಕಾಗಿ ನೂರು ಕೋಟಿ ರು. ಖರ್ಚು ಮಾಡಿದ್ದಾರೆ ಎಂದು ಎಎಪಿ ಪಕ್ಷದ...
ನವದೆಹಲಿ: ಅಣ್ಣಾ ಹಜಾರೆ ಮತ್ತು ನನ್ನ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವುದಕ್ಕಾಗಿ ನೂರು ಕೋಟಿ ರು. ಖರ್ಚು ಮಾಡಿದ್ದಾರೆ ಎಂದು ಎಎಪಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ರೀತಿ ನಮ್ಮ ನಡುವೆ ಕಂದಕ ಸೃಷ್ಟಿಸಲು ಇಷ್ಟೊಂದು ಹಣ ಖರ್ಚು ಮಾಡಿದ ವ್ಯಕ್ತಿ ಯಾರೆಂದು ನಾನು ಹೇಳಲ್ಲ. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಬುಧವಾರ ಕೇಜ್ರಿವಾಲ್ ಹೇಳಿದ್ದಾರೆ.
ನಾನು ಮತ್ತು ಅಣ್ಣಾ ಒಟ್ಟಿಗೆ ಕೆಲಸ ಮಾಡಿದರೆ ಏನಾಗಬಹುದು? ಎಂಬ ಭಯವಿರುವ ವ್ಯಕ್ತಿಗಳೇ ಈ ರೀತಿಯ ಕುತಂತ್ರಗಳನ್ನು ನಡೆಸಿದ್ದಾರೆ. ನಾವಿಬ್ಬರೂ ಜತೆಗಿದ್ದರೆ ಅವರ ಮೇಲೆ ಬೀಳುವ 'ಬಾಂಬ್'ಗೆ ಹೆದರಿಯೇ ಅವರು ಈ ಕುತಂತ್ರಗಳನ್ನು ಹೆಣೆದಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಾರೆ.
ಮುಂದಿನ ದಿನಗಳಲ್ಲಿ ಅಣ್ಣಾ ಜತೆ ಕೆಲಸ ಮಾಡಲು ನಾನು ಸಿದ್ಧ ಎಂದು ಹೇಳಿರುವ ಕೇಜ್ರಿವಾಲ್, ಅಣ್ಣಾ ನನ್ನ ಹೃದಯದಲ್ಲಿದ್ದಾರೆ ಎಂದಿದ್ದಾರೆ.
ಏತನ್ಮಧ್ಯೆ, ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವುದರ ಬಗ್ಗೆ ಕೇಜ್ರಿವಾಲ್ರಲ್ಲಿ ಕೇಳಿದಾಗ, ನನ್ನ ಪಕ್ಷದ ಕೆಲವರು ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿ ಅಂತ ಹೇಳುತ್ತಿದ್ದಾರೆ. ಆದರೆ ನಾನು ವೈಯಕ್ತಿಕವಾಗಿ ಹೇಳುವುದಾದರೆ ಯಾವುದೇ ಪಕ್ಷದ ಜತೆ ಕೈ ಜೋಡಿಸಿ ಅಧಿಕಾರಕ್ಕೇರಲು ನನಗೆ ಇಚ್ಛೆಯಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸರ್ಕಾರ ರಚಿಸುವ ಬಗ್ಗೆ ಭಾನವಾರ ರಾತ್ರಿ ಹೇಳಿಕೆ ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆದಾಗ್ಯೂ, ಲೋಕಪಾಲ ಮಸೂದೆಯ ಬಗ್ಗೆ ಕೇಜ್ರಿವಾಲ್ರಲ್ಲಿ ಅಭಿಪ್ರಾಯ ಕೇಳಿದಾಗ ತಾವು ಜನಲೋಕಪಾಲ ಮಸೂದೆಗಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.