ಕಬ್ಬು ಬೆಳೆಗಾರರ ಮೇಲಿನ ಕೇಸ್ ವಾಪಸ್ಗೆ ಸಂಪುಟ ಸಭೆ ಅಸ್ತು
ಗುಲ್ಬರ್ಗಾದಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆನಿರ್ಧರಿಸಿದೆ.
ಬೆಂಗಳೂರು: ಗುಲ್ಬರ್ಗಾದಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ನಿರ್ಧರಿಸಿದೆ.
ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ಟಿ.ಬಿ.ಜಯಚಂದ್ರ ಅವರು, ಗುಲ್ಬರ್ಗಾದಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿದ್ದ ಕೇಸ್ ವಾಪಸ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಗದಗದಲ್ಲಿ ಕರ್ನಾಟ ವಿಶ್ವವಿದ್ಯಾಲಯ ಭವನ ಸ್ಥಾಪನೆಗೆ 15 ಕೋಟಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಐದು ಕೋಟಿ ರುಪಾಯಿ ನೆರವು ನೀಡಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.
ಕಡಿಮೆ ದರದಲ್ಲಿ ಎಪಿಎಂಸಿ ಭೂಮಿ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ನಿರ್ದೇಶಕಿ ಸುಧಾಬಾಯಿ ಹಿರೇಮಠ ಅವರನ್ನು ಸೇವೆಯಿಂದ ವಜಾಗೊಳಿಸಲು ಸಭೆ ನಿರ್ಧರಿಸಿದೆ ಎಂದು ಜಯಚಂದ್ರ ಹೇಳಿದ್ದಾರೆ.
ಸುಧಾಬಾಯಿ ಅವರು 2009ರಲ್ಲಿ ಬಾಗಲಕೋಟೆಯಲ್ಲಿ ಎಪಿಎಂಸಿ ಉಪ ನಿರ್ದೇಶಕಿಯಾಗಿದ್ದ ವೇಳೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ವರದಿ ನೀಡಿದ್ದರು. ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಇಂದು ಸುಧಾಬಾಯಿ ಅವರನ್ನು ವಜಾ ಮಾಡಲಾಗಿದೆ.