ಎಎಪಿಗೆ ಸರ್ಕಾರ ನಡೆಸುವ ಸಾಮರ್ಥ್ಯ ಇದೆ: ಕೇಜ್ರಿವಾಲ್
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ರಾಷ್ಟ್ರ ರಾಜಧಾನಿಯ ಬಿಕ್ಕಟ್ಟಿಗೆ ಶೀಘ್ರ..
ನವದೆಹಲಿ: ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ರಾಷ್ಟ್ರ ರಾಜಧಾನಿಯ ಬಿಕ್ಕಟ್ಟಿಗೆ ಶೀಘ್ರ ತೆರೆ ಬೀಳುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸರ್ಕಾರ ನಡೆಸುವ ಸಮಾರ್ಥ್ಯ ನಮ್ಮ ಪಕ್ಷಕ್ಕೆ ಇದೆ ಮತ್ತು ಕಾಂಗ್ರೆಸ್, ಬಿಜೆಪಿಗಿಂತ ನಾವು ಉತ್ತಮ ಸರ್ಕಾರ ನೀಡುತ್ತೇವೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಪ್ರಮುಖ ದಿನಪತ್ರಿಕೆಯೊಂದರ ಪ್ರಕಾರ, ಸರ್ಕಾರ ನಡೆಸುವ ಸಾಮರ್ಥ್ಯ ಎಎಪಿಗೆ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಈ ಮುಂಚೆಯೂ ಅವರು(ಕಾಂಗ್ರೆಸ್, ಬಿಜೆಪಿ) ನಮ್ಮನ್ನು ಗಂಭೀರವಾಗಿ ಪರಿಗಣಿಸದೇ, ಚುನಾವಣೆಗೆ ನಿಂತು, ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದರು. ಅವರ ಸವಾಲನ್ನು ಸ್ವೀಕರಿಸಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 28 ಸ್ಥಾನಗಳನ್ನು ಗೆದ್ದಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಮ್ ಆದ್ಮಿಯ(ಜನ ಸಾಮಾನ್ಯರ) ಸಾಮಾರ್ಥ್ಯವನ್ನು ಕಡೆಗಣಿಸಬೇಡಿ ಎಂದು ಪ್ರಮುಖ ರಾಜಕೀಯ ಪಕ್ಷಗಳಿಗೆ ಕೇಜ್ರಿವಾಲ್ ಸೂಚಿಸಿದ್ದಾರೆ.
ಉತ್ತಮ ಆಡಳಿತ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕೇಜ್ರಿವಾಲ್ ಅವರು, ಎಎಪಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಉತ್ತಮ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಜನಾಭಿಪ್ರಾಯ ಸಂಗ್ರಹಿಸಿದ ನಂತರ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಬಗ್ಗೆ ಡಿಸೆಂಬರ್, 23ಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಎಎಪಿ ಸಂಗ್ರಹಿಸಿರುವ ಜನಾಭಿಪ್ರಾಯದಲ್ಲಿ ಶೇ.75ರಷ್ಟು ಮಂದಿ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ರಚಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.