ಎಟಿಎಂನಲ್ಲಿ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ ಡಿಸ್ಚಾರ್ಜ್
ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಟಿಎಂವೊಂದರಲ್ಲಿ ಹಾಡಹಗಲೇ ದುಷ್ಕರ್ಮಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಕಾರ್ಪೊರೇಷನ್ ಬ್ಯಾಂಕ್ ..
ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಟಿಎಂವೊಂದರಲ್ಲಿ ಹಾಡಹಗಲೇ ದುಷ್ಕರ್ಮಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಕಾರ್ಪೊರೇಷನ್ ಬ್ಯಾಂಕ್ ಉದ್ದೋಗಿ ಜ್ಯೋತಿ ಉದಯ್ ಅವರು ಒಂದು ತಿಂಗಳ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಶನಿವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಡಿಸ್ಚಾರ್ಜ್‌ಗು ಮುನ್ನ ತಾವು ಚಿಕಿತ್ಸೆ ಪಡೆದ ಬಿಜೆಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜ್ಯೋತಿ ಉದಯ್, ನಾನು ಹಲವು ವರ್ಷಗಳಿಂದ ಅದೇ ಎಟಿಎಂನಲ್ಲೇ ಹಣ ಡ್ರಾ ಮಾಡುತ್ತಿದ್ದೆ. ಆ ದಿನವೂ ಹಣ ಡ್ರಾ ಮಾಡುವ ಸಂದರ್ಭದಲ್ಲಿ ದುಷ್ಕರ್ಮಿ ಆಗಮಿಸಿದ. ಆತ ಎಟಿಎಂಗೆ ಹಣ ತುಂಬಿಸೋಕೆ ಬಂದಿರಬೇಕು ಅಂದ್ಕೋಂಡೆ. ಆದರೆ ಆತ ನನಗೆ ಹಣ ನೀಡುವಂತೆ ಒತ್ತಾಯಿಸಿದ. ನನ್ನ ಬಳಿ ಹಣ ಇಲ್ಲ ಎಂದು ಹೇಳಿದಕ್ಕೆ, ಆ ದುಷ್ಕರ್ಮಿ ನನ್ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ. ನನ್ನ ರೀತಿ ಯಾರಿಗೂ ಆಗಬಾರದು ಎಂದು ಘಟನೆ ನನೆದು ಕಣ್ಣೀರಿಟ್ಟರು.
ಸೂಕ್ತ ಚಿಕಿತ್ಸೆ ನೀಡಿದ ಬಿಜಿಎಸ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ನನ್ನ ಚೇತರಿಕೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ಬ್ಯಾಂಕ್‌ನವರು ಮಾನಸಿಕವಾಗಿ ನನಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಜ್ಯೋತಿ ತಿಳಿಸಿದರು.
ಈ ವೇಳೆ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ವೆಂಕಟರಮಣ ಅವರು, ಜ್ಯೋತಿ ಉದಯ್ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಜನವರಿ 15ರ ನಂತರ ಅವರು ನಡೆದಾಡುವ ಸ್ಥಿತಿಗೆ ಬರಲಿದ್ದಾರೆ ಎಂದು ಹೇಳಿದರು.
ಜ್ಯೋತಿ ಅವರಿಗೆ ಫಿಸಿಯೋಥೆರಪಿ ಮಾಡಲಾಗಿದ್ದು, ಮತ್ತೊಮ್ಮೆ ಫಿಸಿಯೋಥೆರಪಿಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದರು.
ಜ್ಯೋತಿಗೆ ಇನ್ನು ಎರಡು ತಿಂಗಳ ವಿಶ್ರಾಂತಿಯ ಅಗತ್ಯ ಇದೆ. ಹೀಗಾಗಿ 2 ಅಥವಾ ಮೂರು ತಿಂಗಳ ಬಳಿಕ ಅವರು ತಮ್ಮ ಕೆಲಸಕ್ಕೆ ಮರಳಬಹುದು ಎಂದು ವೆಂಕಟರಮಣ ಅವರು ಹೇಳಿದರು.
ಈ ಮಧ್ಯೆ ಜ್ಯೋತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿ ಒಂದು ತಿಂಗಳಾದರೂ ಪತ್ತೆಯಾಗದೇ ಇರುವುದರಿಂದ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾತಿಕಿಯ ಸುಳಿವು ನೀಡಿದವರಿಗೆ ಈ ಮುಂಚೆ 1 ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದ ಪೊಲೀಸರು, ಇದೀಗ ಅದನ್ನು 5 ಲಕ್ಷ ರುಪಾಯಿಗೆ ಏರಿಸಿದ್ದಾರೆ. ಆತನನ್ನೆ ಹೋಲುವ ವ್ಯಕ್ತಿ ಇಲ್ಲಿ ಇದ್ದಾನೆ ಎಂಬ ಹಲವು ಕರೆಗಳು ಬರುತ್ತಿವೆ. ಆದರೆ ಪೊಲೀಸರು ವಶಕ್ಕೆ ತೆಗೆದುಕೊಂಡ ವ್ಯಕ್ತಿಗಳು ನಿಜವಾದ ಆರೋಪಿಯಲ್ಲ ಎಂಬುದು ಬೇಸರ ಮೂಡಿಸುತ್ತಿದೆ.
ನವೆಂಬರ್ 19ರಂದು ಕಾರ್ಪೋರೇಷನ್ ವೃತ್ತದಲ್ಲಿರುವ ಎಲ್‌ಐಸಿ ಕಚೇರಿ ಕಟ್ಟಡದ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ರಾಜರಾಜೇಶ್ವರಿ ನಗರ ನಿವಾಸಿ ಜ್ಯೋತಿ ಉದಯ್ ಮೇಲೆ ದುಷ್ಕರ್ಮಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಹಣ ದೋಚಿ ಪರಾರಿಯಾಗಿದ್ದಾನೆ.