ಪೇಯ್ಡ್ ನ್ಯೂಸ್ನ್ನು ಚುನಾವಣಾ ಅಪರಾಧವೆಂದು ಪರಿಗಣಿಸಿ: ಇಸಿ
ಕಾಸಿಗಾಗಿ ಸುದ್ದಿ(ಪೇಯ್ಡ್ ನ್ಯೂಸ್) ಮಾಡುವುದನ್ನು ಚುನಾವಣಾ ಅಪರಾಧವೆಂದು ಪರಿಗಣಿಸುವಂತೆ ಕೇಂದ್ರ ಚುನಾವಣಾ..
ತಿರುವನಂತಪುರ: ಕಾಸಿಗಾಗಿ ಸುದ್ದಿ(ಪೇಯ್ಡ್ ನ್ಯೂಸ್) ಮಾಡುವುದನ್ನು ಚುನಾವಣಾ ಅಪರಾಧವೆಂದು ಪರಿಗಣಿಸುವಂತೆ ಕೇಂದ್ರ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ಶನಿವಾರ ಹೇಳಿದ್ದಾರೆ.
'ಚುನಾವಣಾ ಸುಧಾರಣೆ' ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಸಂಪತ್, ಲಂಚ ಪಡೆದು ಸುದ್ದಿ ಮಾಡುವುದರಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಇದು ಸಹ ಎಲ್ಲರ ಮೇಲು ಪರಿಣಾಮ ಬೀರುತ್ತದೆ... ಮಾಧ್ಯಮ ಸಂಸ್ಥೆ, ಮಾಧ್ಯಮ ವ್ಯಕ್ತಿಗಳು ಇಂತಹ ಭ್ರಷ್ಟಾಚಾರದಲ್ಲಿ ತೊಡಗುವುದರಿಂದ ಚುನಾವಣಾ ಪ್ರಕ್ರಿಯೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಪೇಡ್ ನ್ಯೂಸ್ ಅನ್ನು ಚುನಾವಣಾ ಅಪರಾಧವೆಂದು ಪರಿಗಣಿಸಲೇಬೇಕು. ಇದರಿಂದ ಪ್ರಾಯೋಜಿತ ಸುದ್ದಿಗಳಿಗೆ ಬ್ರೇಕ್ ಬೀಳಲಿದೆ ಎಂದು ಸಂಪತ್ ತಿಳಿಸಿದ್ದಾರೆ.
ಇದೇ ವೇಳೆ, ಚುನಾವಣೆಗೆ ಮುನ್ನ ಅಧಿಕಾರದಲ್ಲಿರುವ ಸರ್ಕಾರಗಳು ಮಾಧ್ಯಮಕ್ಕೆ ನೀಡುವ ಸಾವಿರಾರು ಕೋಟಿ ರುಪಾಯಿ ಜಾಹಿರಾತಿಗೂ ಚುನಾವಣಾ ನೀತಿ ಸಂಹಿತೆ ಅನ್ವಯವಾಗಲಿದೆ ಎಂದಿದ್ದಾರೆ. ಚುನಾವಣಾ ನೀತಿ ಸಂಹಿತಿ ಜಾರಿಗೆ ಬಂದ ನಂತರ, ಬಡತನ ನಿರ್ಮೂಲನಾ ಕಾರ್ಯಕ್ರಮ ಹಾಗೂ ಗ್ರಾಹಕರ ಹಿತಾಸಕ್ತಿ ಕುರಿತ ಜಾಹಿರಾತುಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಜಾಹಿರಾತು ಪ್ರಕಟಿಸುವಂತಿಲ್ಲ ಎಂದು ಸಂಪತ್ ಹೇಳಿದ್ದಾರೆ.