ದೇವಯಾನಿಗೆ ವಿನಾಯಿತಿ ನೀಡುವಂತೆ ಭಾರತ ಆಗ್ರಹ
ದೇವಯಾನಿ ಪ್ರಕರಣದಿಂದ ಭಾರತ ಮತ್ತು ಅಮೆರಿಕ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳೇನೂ ಕಾಣುತ್ತಿಲ್ಲ....
ನವದೆಹಲಿ: ದೇವಯಾನಿ ಪ್ರಕರಣದಿಂದ ಭಾರತ ಮತ್ತು ಅಮೆರಿಕ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳೇನೂ ಕಾಣುತ್ತಿಲ್ಲ. ನ್ಯೂಯಾರ್ಕ್‌ನಲ್ಲಿರುವ ಭಾರತದ ವಿಶ್ವಸಂಸ್ಥೆ ಕಾಯಂ ಕಚೇರಿಗೆ ವರ್ಗಾವಣೆಗೊಂಡರೂ ದೇವಯಾನಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿರುವ ಹಿನ್ನೆಲೆಯಲ್ಲಿ ದೇವಯಾನಿಗೆ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡುವ ವಿನಾಯಿತಿ ಮತ್ತು ಸೌಲಭ್ಯಗಳನ್ನು ನೀಡಬೇಕೆಂದು ಭಾರತ ಒತ್ತಾಯಿಸಿದೆ.
ವೀಸಾ ವಂಚನೆಯ ಆರೋಪದಲ್ಲಿ ಬಂಧಿತಳಾದ ದೇವಯಾನಿ ಖೋಬ್ರಾಗದೆ ಅವರನ್ನು 250,000 ಅಮೆರಿಕನ್ ಡಾಲರ್ ಮುಚ್ಚಳಿಕೆಯ ಆಧಾರದಲ್ಲಿ ಬಂಧಮುಕ್ತಗೊಳಿಸಲಾಗಿದೆ.
ದೇವಯಾನಿಯವರ ಮನೆ ಕೆಲಸದಾಕೆ ಸಂಗೀತಾ ರಿಚಾರ್ಡ್ಸ್ ಅವರಿಗೆ ಸರಿಯಾಗಿ ಸಂಬಂಳ ನೀಡದೆ ವೀಸಾ ವಂಚನೆ ಮಾಡಿದ ಆರೋಪದಲ್ಲಿ ದೇವಯಾನಿ ಅವರನ್ನು ಬಂಧಿಸಲಾಗಿತ್ತು. ಅಮೆರಿಕದಲ್ಲಿ ಬಂಧನಕ್ಕೊಳಗಾದ ದೇವಯಾನಿ ಜತೆ ಅಮೆರಿಕ ಅಮಾನವೀಯವಾಗಿ ವರ್ತಿಸಿದ್ದು ಮಾತ್ರವಲ್ಲದೆ ಆಕೆಯನ್ನು ಮಾದಕ ವ್ಯಸನಿಗಳ ಸೆಲ್‌ನಲ್ಲಿ ಕೂಡಿ ಹಾಕಿತ್ತು.
ಈ ಬಗ್ಗೆ ಭಾರತ ದನಿಯೆತ್ತಿದ್ದು, ಅಮೆರಿಕದ ನಡತೆಯನ್ನು ತೀವ್ರವಾಗಿ ಖಂಡಿಸಿತ್ತು.
ಆದಾಗ್ಯೂ, ದೇವಯಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಯುಕ್ತ ರಾಷ್ಟಗಳಿಗಾಗಿರುವ ಭಾರತದ ರಾಯಭಾರಿ ಅಸೋಕ್ ಮುಖರ್ಜಿ ಅವರು ದೇವಯಾನಿ ಅವರಿಗೆ ರಾಯಭಾರಿ ಅಧಿಕಾರಿಗೆ ನೀಡುವ ಸೌಲಭ್ಯ ಮತ್ತು ವಿನಾಯಿತಿಯನ್ನು ನೀಡಬೇಕೆಂದು ಆಗ್ರಹಿಸಿ ಸಂಯುಕ್ತ ರಾಷ್ಟ್ರಗಳ ಅಧ್ಯಕ್ಷ ಬಾನ್ ಕಿ ಮೂನ್ ಅವರಿಗೆ ಪತ್ರ ಬರೆದಿದ್ದಾರೆ.