ಆಮ್ ಆದ್ಮಿ ವಿರುದ್ಧ 'ಕೈ' ಕಾರ್ಯಕರ್ತರ ಪ್ರತಿಭಟನೆ
ಜನಾಭಿಪ್ರಾಯಕ್ಕೆ ಮಣಿದ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಆಮ್ ಆದ್ಮಿ..
ನವದೆಹಲಿ: ಜನಾಭಿಪ್ರಾಯಕ್ಕೆ ಮಣಿದ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಸಿದ್ಧತೆ ನಡೆಸಿದೆ. ಆದರೆ ಕೆಲವು ಅತೃಪ್ತ ಕಾಂಗ್ರೆಸ್ ಕಾರ್ಯಕರ್ತರು ಎಎಪಿ ವಿರುದ್ಧ ಮಂಗಳವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಕೈ ಕಾರ್ಯಕರ್ತರು, ಎಎಪಿ ಕಚೇರಿ ಮುಂದೆಯೇ ಅರವಿಂದ್ ಕೇಜ್ರಿವಾಲ್ ಅವರ ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಣ್ಣಾ ಹಜಾರೆ ಅವರಿಗೆ ದ್ರೋಹ ಮಾಡಿದ ಕೇಜ್ರಿವಾಲ್ ಅವರಿಗೆ ಸರ್ಕಾರ ರಚಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಈ ಮಧ್ಯೆ ಎಎಪಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿರುವುದು ಕೆಲ ಮುಖಂಡರಿಗೆ ಇಷ್ಟವಿಲ್ಲ ಎಂದು ಕಾಂಗ್ರೆಸ್ ನಾಯಕ ಜನಾರ್ದನ್ ದ್ವಿವೇದಿ ಅವರು ಬಹಿರಂಗವಾಗಿಯೇ ಹೇಳಿದ್ದಾರೆ.
ಬಹುಮತದ ಕೊರತೆ ಹೊಂದಿರುವ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೇನೋ ಮುಂದಾಗಿದೆ. ಆದರೆ, ಮೇಲ್ನೋಟಕ್ಕೆ ಇದು ಒಲ್ಲದ ಮದುವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕೇಜ್ರಿವಾಲ್ ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಅಷ್ಟರಲ್ಲೇ ಚುನಾವಣೆ ವೇಳೆ ನೀವು ನೀಡಿದ್ದ 18 ಭರವಸೆಗಳನ್ನು ಯಾವಾಗ ಈಡೇರಿಸುತ್ತೀರಿ ಎಂದು ಕಾಂಗ್ರೆಸ್ ಆಮ್ ಆದ್ಮಿ ಪಕ್ಷವನ್ನು ಕೇಳಲು ಆರಂಭಿಸಿದೆ. ಭರವಸೆಗಳ ಈಡೇರಿಕೆಗೆ ಗಡುವು ಹಾಕಿಕೊಳ್ಳಿ ಎನ್ನುವಂತಿದೆ ಕಾಂಗ್ರೆಸ್‌ನ ಈ ವರಸೆ.
ಇದೇ ವೇಳೆಗೆ ಆಮ್ ಆದ್ಮಿ ಪಕ್ಷ ಕೂಡ ಕಾಂಗ್ರೆಸ್‌ನ ಇತಿಹಾಸವನ್ನು ನೋಡಿದರೆ ನಮ್ಮ ಸರ್ಕಾರ ಹೆಚ್ಚು ದಿನ ಉಳಿಯುವ ಭರವಸೆ ಇಲ್ಲ ಎನ್ನುತ್ತಿದೆ. ಜವಾಬ್ದಾರಿಯಿಂದ ನುಣುಜಿಕೊಳ್ಳಬಾರದು, ಜನರ ಅಭಿಪ್ರಾಯವನ್ನು ಧಿಕ್ಕರಿಸಬಾರದು ಎನ್ನುವ ಕಾರಣಕ್ಕಷ್ಟೇ ನಾವು ಸರ್ಕಾರ ರಚನೆಗೆ ಮುಂದಾಗಿದ್ದೇವೆಯೇ ಹೊರತು ಅಧಿಕಾರದಾಹದಿಂದಲ್ಲ ಎಂದು ಆಮ್ ಆದ್ಮಿ ಹೇಳಿಕೊಳ್ಳುತ್ತಿದೆ. ಈ ನಡುವೆ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕೂಡ ಆಮ್ ಆದ್ಮಿಗೆ ಕಾಂಗ್ರೆಸ್ ನೀಡಿರುವ ಬೆಂಬಲ ಷರತ್ತುರಹಿತವೇನಲ್ಲ ಎಂದಿದ್ದಾರೆ.
ಜನಲೋಕಪಾಲ ಮಸೂದೆಗಾಗಿ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ನಿರಶನ ಆರಂಭಿಸಿದ ರಾಮಲೀಲಾ ಮೈದಾನದಲ್ಲೇ ಅರವಿಂದ್ ಕೇಜ್ರಿವಾಲ್ ಅವರು ಡಿಸೆಂಬರ್ 26ಕ್ಕೆ ದೆಹಲಿಯ 7ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.