ಕಾಂಗ್ರೆಸ್ನ ಭ್ರಷ್ಟಾಚಾರಿಗಳ ವಿರುದ್ಧ ತನಿಖೆಗೆ ಒತ್ತು: ಎಎಪಿ
ಆಮ್ ಆದ್ಮಿ ಪಕ್ಷ(ಎಎಪಿ) ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಆರೋಪ ಹೋತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ತನಿಖೆಗೆ ಆದೇಶಿಸಲಾಗುವುದು ಎಂದು ಎಎಪಿ
ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ) ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಆರೋಪ ಹೋತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ತನಿಖೆಗೆ ಆದೇಶಿಸಲಾಗುವುದು ಎಂದು ಎಎಪಿ ಮಂಗಳವಾರ ಹೇಳಿದೆ.
ಬಹುಮತದ ಕೊರತೆ ಹೊಂದಿರುವ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೇನೋ ಮುಂದಾಗಿದೆ. ಆದರೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಎಎಪಿ ನೀಡಿದ ಭರವಸೆ ಈಡೇರಿಸುತ್ತದೆಯೇ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಿಗಳ ವಿರುದ್ಧ ತನಿಖೆ ಆದೇಶಿಸುತ್ತದೆಯೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಇದಕ್ಕೆ ಪ್ರತಿಕ್ರಯಿಸಿರುವ ಎಎಪಿ ನಾಯಕ ಯೋಗೇಂದ್ರ ಯಾದವ್, ಎಎಪಿ ಅಧಿಕಾರಕ್ಕೆ ಬಂದ ಮೇಲೆ, ಕಾಂಗ್ರೆಸ್ ಭ್ರಷ್ಟಾಚಾರಿ ನಾಯಕರ ವಿರುದ್ಧ ತನಿಖೆಗೆ ಆದೇಶಿಸುತ್ತದೆ. ಆರೋಪ ಸಾಬೀತಾದರೆ ಕಠಿಣ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂಬ ಕಾರಣಕ್ಕೆ, ಕಾಂಗ್ರೆಸ್ನಲ್ಲಿ ಇರುವ ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂಬ ಮಾತು ಸುಳ್ಳು. ಕಾಂಗ್ರೆಸ್ ಅಥವಾ ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ಭ್ರಷ್ಚಾಚಾರ ಪ್ರಕರಣ ದಾಖಲಾಗಿದ್ದರೆ, ತನಿಖೆಗೆ ಆದೇಶಿಸಿ, ಕ್ರಮಕೈಗೊಳ್ಳಲಿದೆ. ಇದಕ್ಕಾಗಿ ಎಎಪಿ ಅಧಿಕಾರ ಕಳೆದುಕೊಳ್ಳಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಹೇಳುವಂತಹ ಯಾವುದೇ ರೀತಿಯ ಷರತ್ತುಗಳನ್ನು ಎಎಪಿ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆಮ್ ಆದ್ಮಿ ಪಕ್ಷ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀಡಿರುವಂತಹ ಭರವಸೆಗಳನ್ನು ಈಡೇರಿಸುವುದೇ ಮುಖ್ಯವಾಗಿದೆ. ಇದಕ್ಕೆ ಕಾಂಗ್ರೆಸ್ನಿಂದ ಯಾವುದೇ ಒತ್ತಡ ಬಂದರು ಲೆಕ್ಕಿಸುವುದಿಲ್ಲ ಎಂದು ಅವರು ಸ್ಫಷ್ಟನೆ ನೀಡಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ನಮ್ಮ ಸರ್ಕಾರ ಹೆಚ್ಚು ದಿನ ಉಳಿಯುವ ಭರವಸೆ ಇಲ್ಲ. ಒಂದು, ನಾಲ್ಕು ಅಥವಾ 6 ತಿಂಗಳು ಅಧಿಕಾರ ನಡೆಸುತ್ತದೆಯೋ, ಇಲ್ಲವೋ ಎಂದು ಕಾದು ನೋಡಬೇಕಿದೆ ಎಂದು ಎಎಪಿ ನಾಯಕ ಪ್ರಶಾಂತ್ ಭೂಷಣ್ ಹೇಳಿದ್ದಾರೆ.