ಕೇಜ್ರಿವಾಲ್‌ಗೆ ಸರ್ಕಾರಿ ಬಂಗಲೆಯೂ ಬೇಡ್ವಂತೆ...
ನಿನ್ನೆಯಷ್ಟೆ ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದ ದೆಹಲಿ ಭಾವಿ ಮುಖ್ಯಮಂತ್ರಿ, ಆಮ್ ಆದ್ಮಿಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇದೀಗ..
ನವದೆಹಲಿ: ನಿನ್ನೆಯಷ್ಟೆ ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದ ದೆಹಲಿ ಭಾವಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಮುಖ್ಯಮಂತ್ರಿಗಳಿಗೆ ನೀಡಲಾಗುವ ಸರ್ಕಾರಿ ಬಂಗಲೆಯೂ ಬೇಡವೆಂದು ಹೇಳಿದ್ದಾರೆ.
ಸರ್ಕಾರದ ವತಿಯಿಂದ ಅತಿ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಭಾರಿ ಭದ್ರತೆಯ ಸರ್ಕಾರಿ ಬಂಗಲೆ ಬೇಡವೆಂದು ಕೇಜ್ರಿವಾಲ್ ಅವರು ಅಧಿಕೃತವಾಗಿ ನಿರಾಕರಿಸಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆ ಕುರಿತು ಹಾಗೂ ಸಚಿವ ಸಂಪುಟ ಸೇರುವ ಶಾಸಕರ ಕುರಿತು ಮಾಹಿತ ಪಡೆದುಕೊಳ್ಳುವ ಸಂಬಂಧ ಇಂದು ತಮ್ಮನ್ನು ಭೇಟಿ ಮಾಡಿದ ದೆಹಲಿ ಮುಖ್ಯ ಕಾರ್ಯದರ್ಶಿಗೆ ಕೇಜ್ರಿವಾಲ್ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಕೇಜ್ರಿವಾಲ್ ಅವರು ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಅವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ.
ಜನಾಭಿಪ್ರಾಯಕ್ಕೆ ಮಣಿದು ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ದೆಹಲಿಯಲ್ಲಿ ಸರ್ಕಾರ ರಚಿಸುವುದಾಗಿ ನಿನ್ನೆ ಆಮ್ ಆದ್ಮಿ ಪಕ್ಷ ಘೋಷಿಸಿತ್ತು. ಈ ಮೂಲಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ರಚನೆ ಸಂಬಂಧ ದೆಹಲಿಯಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟಿಗೆ ಕೊನೆಗೂ ತೆರೆ ಬಿದ್ದಿತ್ತು.