ದೆಹಲಿಯಲ್ಲಿ ಆಪ್ ಸರ್ಕಾರ ರಚನೆಗೆ ರಾಷ್ಟ್ರಪತಿ ಅಂಕಿತ
ದೆಹಲಿಯಲ್ಲಿ ನೂತನ ಸರ್ಕಾರ ರಚನೆ ಮಾಡುವಂತೆ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ಆಹ್ವಾನ ನೀಡಿದ್ದಾರೆ...
ನವದೆಹಲಿ: ದೆಹಲಿಯಲ್ಲಿ ನೂತನ ಸರ್ಕಾರ ರಚನೆ ಮಾಡುವಂತೆ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ಆಹ್ವಾನ ನೀಡಿದ್ದಾರೆ.
ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ತರುವ ಬಗ್ಗೆಯೂ ಚಿಂತನೆಗಳು ನಡೆದಿದ್ದವು.
ದೆಹಲಿಯಲ್ಲಿ 70 ವಿಧಾನಸಭೆ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ ಸುಮಾರು 36 ಸ್ಥಾನಗಳ ಅವಶ್ಯಕತೆಯಿತ್ತು. ಆದರೆ ಕೇವಲ 8 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಎಎಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ತಿಳಿಸಿತ್ತು. ಎಎಪಿಗೆ ಬೇಷರತ್ತು ಬೆಂಬಲ ಸಿಕ್ಕಿದ್ದರಿಂದ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ದೆಹಲಿಯ ನೂತನ ಸರ್ಕಾರ ರಚನೆ ಸಂಬಂಧ ದೆಹಲಿಯ ಉಪ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿರುವ ರಾಷ್ಟ್ರಪತಿಗಳು ಎಎಪಿಗೆ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಾರತೀಯ ಜನತಾ ಪಕ್ಷ(ಬಿಜೆಪಿ) ಸುಮಾರು 32 ಸ್ಥಾನಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರ ಸ್ಥಾನದಲ್ಲಿ 28 ಸ್ಥಾನಗಳನ್ನು ಗಳಿಸಿದ್ದ ಎಎಪಿ ಇತ್ತು. 32 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ತಾನು ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ನಿರ್ಧರಿಸಿದ ಪರಿಣಾಮ ಸರ್ಕಾರ ರಚನೆ ಮಾಡುವ ಅವಕಾಶ ಎಎಪಿಗೆ ಒಲಿದು ಬಂದಿತ್ತು.