2002ರ ಗುಜರಾತ್ ಗಲಭೆ: ಮೋದಿಗೆ ಕೋರ್ಟ್ ಕ್ಲೀನ್ ಚಿಟ್
ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧದ ಬಹುನಿರೀಕ್ಷಿತ 2002ರ ಗುಜರಾತ್ ಕೋಮುಗಲಭೆ ಪ್ರಕರಣದ ಅಂತಿಮ ತೀರ್ಪು..
ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧದ ಬಹುನಿರೀಕ್ಷಿತ 2002ರ ಗುಜರಾತ್ ಕೋಮುಗಲಭೆ ಪ್ರಕರಣದ ಅಂತಿಮ ತೀರ್ಪು ಗುರುವಾರ ಪ್ರಕಟವಾಗಿದ್ದು, ಮೋದಿಗೆ ಅಹಮದಾಬಾದ್ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.
ಕೋಮುಗಲಭೆ ಪ್ರಕರಣದ ವಿಚಾರಣೆ ನಡೆಸಿದ್ದ ಅಹಮದಾಬಾದ್ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಬಿ.ಜೆ.ಗನತ್ರ ಅವರು ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು, ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿದ ಗನತ್ರ, ವಿಶೇಷ ತನಿಖಾ ತಂಡ(ಎಸ್ಐಟಿ)ದ ವರದಿಯನ್ನು ಎತ್ತಿ ಹಿಡಿದಿದ್ದಾರೆ.
ಗುಜರಾತ್ ಗಲಭೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಈಗಾಗಲೇ ಮೋದಿ ಸೇರಿದಂತೆ ಪ್ರಕರಣದ 57 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ವರದಿ ನೀಡಿತ್ತು. ಆದರೆ ಎಸ್ಐಟಿಯ ನಿರ್ಧಾರವನ್ನು ವಿರೋಧಿಸಿ ಝಾಕಿಯಾ ಝಪ್ರಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಅಕ್ಟೋಬರ್ 28ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿದ್ದರು. ನಂತರ ಡಿಸೆಂಬರ್ 2ಕ್ಕೆ ಮುಂದೂಡಿದ್ದರು. ಅಂದೂ ಕೂಡ ತೀರ್ಪು ಪ್ರಕಟಿಸದೇ ಡಿಸೆಂಬರ್ 26ಕ್ಕೆ ಮುಂದೂಡಿದ್ದರು.
ಫೆಬ್ರುವರಿ 28, 2002ರಲ್ಲಿ ಗುಜರಾತ್ನ ಗುಲ್ಬರ್ಗ್ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಝಾಕಿಯಾ ಝಫ್ರಿ ಅವರ ಪತಿ ಹಾಗೂ ಮಾಜಿ ಕಾಂಗ್ರೆಸ್ ಸಂಸದ ಇಶಾನ್ ಝಫ್ರಿ ಸೇರಿದಂತೆ 35 ಮಂದಿ ಸಜೀವ ದಹನವಾಗಿದ್ದರು.
'ಕ್ಲೀನ್ ಚಿಟ್' ಪ್ರತಿಕ್ರಿಯೆ'
'ಅಹ್ಮದಾಬಾದ್ ನ್ಯಾಯಾಲಯದ ತೀರ್ಪಿನಿಂದಾಗಿ ನಿರಾಸೆಯಾಗಿದ್ದು, ನಾವು ಇದರಿಂದ ಧೃತಿಗೆಡುವುದಿಲ್ಲ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ'.
-ಝಕಿಯಾ ಜಾಫ್ರಿ (ಎಸ್ಐಟಿ ವರದಿ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾರರು)
'ನ್ಯಾಯಾಲಯದ ತೀರ್ಪಿನಿಂದಾಗಿ ಸಂತಸವಾಗಿದ್ದು, ಸತ್ಯಾಂಶ ಬಹಿರಂಗವಾಗಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ. ಸುಳ್ಳು ಪಿತೂರಿಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಸಾಬೀತು ಮಾಡಿದೆ'.
-ಅರುಣ್ ಜೇಟ್ಲಿ (ಬಿಜೆಪಿ ಹಿರಿಯ ಮುಖಂಡ)
'ಸತ್ಯಮೇವ ಜಯತೆ. ನ್ಯಾಯಾಲಯದ ತೀರ್ಪು ಸತ್ಯಕ್ಕೆ ಸಂದಿರುವ ಜಯವಾಗಿದೆ'.
-ನರೇಂದ್ರ ಮೋದಿ (ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ)