ದೆಹಲಿ ಜನರೇ ಸಿಎಂ, ನಾನಲ್ಲ: ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ನಾನಲ್ಲ. ಜನತೆಯೇ ಈ ರಾಜ್ಯದ ಮುಖ್ಯಮಂತ್ರಿಗಳು ಎಂದು ನಿಯೋಜಿತ..
ನವದೆಹಲಿ: ದೆಹಲಿ ಮುಖ್ಯಮಂತ್ರಿ ನಾನಲ್ಲ. ಜನತೆಯೇ ಈ ರಾಜ್ಯದ ಮುಖ್ಯಮಂತ್ರಿಗಳು ಎಂದು ನಿಯೋಜಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ(ಎಎಪಿ) ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಜಾರಿಗೆ ತರಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ದೆಹಲಿ ಜನತೆಗೆ 700 ಲೀ.ಉಚಿತ ನೀರು ನೀಡುವ ಕುರಿತು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಡಿಸೆಂಬರ್ 28ರಂದು(ಶನಿವಾರ) ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಕೇಜ್ರಿವಾಲ್ ಜನತೆಗೆ ಆಹ್ವಾನ ನೀಡಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ದೆಹಲಿ ಜನತೆಯೇ ನಿಜವಾದ ಮುಖ್ಯಮಂತ್ರಿಗಳು, ನಾನಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹೇಳಿದರು.
ಕಾಂಗ್ರೆಸ್ನ 15 ವರ್ಷಗಳ ಅಧಿಕಾರದ ಗದ್ದುಗೆಯನ್ನು ಉರುಳಿಸಿ ಫೀನಿಕ್ಸ್ನಂತೆ ಮೇಲೆದ್ದು ಬಂದ ಅರವಿಂದ ಕೇಜ್ರಿವಾಲ್ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗಾಂಧಿವಾದಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದ ರಾಮ್ಲೀಲಾ ಮೈದಾನದಲ್ಲೇ ಕೇಜ್ರಿವಾಲ್ ದೆಹಲಿಯ 7ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ, 6 ಮಂದಿ ಆಪ್ ಶಾಸಕರೂ ಸಚಿವರಾಗಿ ಪ್ರತಿಜ್ಞಾ ಸ್ವೀಕಾರ ಮಾಡಲಿದ್ದಾರೆ.
ಅಣ್ಣಾಗೂ ಆಹ್ವಾನ: ಶನಿವಾರ ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಅಣ್ಣಾ ಹಜಾರೆ, ಕಿರಣ್ ಬೇಡಿ, ನ್ಯಾ.ಸಂತೋಷ್ ಹೆಗ್ಡೆಗೆ ಆಹ್ವಾನ ನೀಡಲಾಗಿದೆ. ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಪ್ರಸ್ತಾಪವನ್ನು ರಾಷ್ಟ್ರಪತಿ ಅಂಗೀಕರಿಸಿದ ಬೆನ್ನಲ್ಲೇ ಪ್ರಮಾಣವಚನ ದಿನಾಂಕ ಘೋಷಿಸಲಾಯಿತು. ಜ.3ರೊಳಗೆ ಬಹುಮತ ಸಾಬೀತುಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಜಂಗ್ ಕೇಜ್ರಿವಾಲ್ಗೆ ಆದೇಶಿಸಿದ್ದಾರೆ.