ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಷ್ಟ್ರಕವಿ ಜಿಎಸ್‌ಎಸ್ ಪಂಚಭೂತಗಳಲ್ಲಿ ಲೀನ

ಸೋಮವಾರ ಮಧ್ಯಾಹ್ನ ನಿಧನರಾಗಿದ್ದ ಕನ್ನಡದ ಮೂರನೇ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಪಾರ್ಥಿವ ಶರೀರ..

Lingaraj Badiger
Updated On : 26 Dec 2013, 5:24 am

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಕಳೆದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದ ಕನ್ನಡದ ಮೂರನೇ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಪಾರ್ಥಿವ ಶರೀರ ಗುರುವಾರ ಪಂಚಭೂತಗಳಲ್ಲಿ ಲೀನವಾಯಿತು.

ನಗರದ ಜ್ಞಾನಭಾರತಿ ಸಮೀಪದ ಕರ್ನಾಟಕ ಕಲಾಗ್ರಾಮದಲ್ಲಿ ಇಂದು ಸಂಜೆ 5ಗಂಟೆಯ ಸುಮಾರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಷ್ಟ್ರಕವಿಯ ಅಂತ್ಯಕ್ರಿಯೆ ನೆರವೇರಿತು. ಜಿ.ಎಸ್ ಶಿವರುದ್ರಪ್ಪ ಅವರ ಹಿರಿಯ ಪುತ್ರ ಜಯದೇವ್ ಅವರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ನಂತರ ದ್ವಿತೀಯ ಪುತ್ರ ಶಿವಪ್ರಸಾದ್  ಸಹ ಅಗ್ನಿ ಸ್ಪರ್ಶ ಮಾಡಿದರು.

ಜಿಎಸ್‌ಎಸ್ ಜೀವಿತದಲ್ಲಿದ್ದಾಗ ಅಪೇಕ್ಷಪಟ್ಟಂತೆ ಅಂತ್ಯಕ್ರಿಯೆ ವೇಳೆ ಯಾವುದೇ ಪೂಜೆ-ಪುನಸ್ಕಾರ ನಡೆಸದೆ ತೀರ ಸರಳವಾಗಿ ಅವರ ಪಾರ್ಥಿವ ಶರೀರವನ್ನು ದಹನದೊಳಿಸಲಾಯಿತು. ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಯಾವುದೇ ಸ್ಮಾರಕ ಅಥವಾ ಸಮಾಧಿ ನಿರ್ಮಿಸುವ ಬದಲು ಅವರ ಹೆಸರಿನಲ್ಲಿ ಗ್ರಂಥಾಲಯ ಅಥವಾ ಅಧ್ಯಯನ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.

ಜಿಎಸ್ಎಸ್ ಅವರ ಕಿರಿಯ ಪುತ್ರ ಡಾ.ಶಿವಪ್ರಸಾದ್ ಅವರು ವಿದೇಶದಲ್ಲಿದ್ದ ಕಾರಣ ಅವರ ಬರುವಿಕೆವರೆಗೆ ಜಿಎಸ್ಎಸ್ ಪಾರ್ಥಿವ ಶರೀರವನ್ನು ಕೆ.ಆರ್.ರಸ್ತೆಯಲ್ಲಿರುವ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.. ಬುಧವಾರ ಡಾ.ಶಿವಪ್ರಸಾದ್ ಅವರು ಇಂಗ್ಲಂಡ್ನಿಂದ ಸಂಸಾರ ಸಮೇತರಾಗಿ ನಗರಕ್ಕೆ ಆಗಮಿಸಿದ್ದರು.

ಇಂದು ಬೆಳಗ್ಗೆ 7ಕ್ಕೆ ಜಿಎಸ್ಎಸ್ ಪಾರ್ಥಿವ ಶರೀರವನ್ನು ಕಿಮ್ಸ್ನಿಂದ ಬನಶಂಕರಿಯಲ್ಲಿರುವ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಬೆಳಗ್ಗೆ 8 ರಿಂದ 8.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಅಲ್ಲಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ತಂದು, ಪರಿಷತ್ತಿನಲ್ಲಿ 9.30 ರಿಂದ 10ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.

ಪರಿಷತ್ತಿನಿಂದ ತೆರೆದ ವಾಹನದಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ತಂದು ಮಧ್ಯಾಹ್ನ 2ರ ವರೆಗೂ ಅಲ್ಲಿಯೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೈಸೂರು ರಸ್ತೆ ಮೂಲಕ ಜ್ಞಾನಭಾರತಿಯಲ್ಲಿರುವ ಕಲಾಗ್ರಾಮಕ್ಕೆ ತೆರೆದ ವಾಹನದಲ್ಲೇ ಸಾಗಿಸಿ, ಸಂಜೆ 5ರ ಸುಮಾರಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement