ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶಾಸಕರು ವಿದೇಶಕ್ಕೆ ಹಾರುವುದು ಖಚಿತ: ಮಾಲೀಕಯ್ಯ ಗುತ್ತೇದಾರ್

ಅಧ್ಯಯನದ ಹೆಸರಲ್ಲಿ ಕೈಗೊಳ್ಳುವ ಶಾಸಕರ ಮೋಜಿನ ವಿದೇಶ ಪ್ರವಾಸವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಶಾಸಕ ಮಾಲೀಕಯ್ಯ ಗುತ್ತೇದಾರ್...

Lingaraj Badiger
Updated On : 26 Dec 2013, 2:56 am

ಬೆಂಗಳೂರು: ಅಧ್ಯಯನದ ಹೆಸರಲ್ಲಿ ಕೈಗೊಳ್ಳುವ ಶಾಸಕರ ಮೋಜಿನ ವಿದೇಶ ಪ್ರವಾಸವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು, ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಖಚಿತ ಎಂದು ಗುರುವಾರ ಹೇಳಿದ್ದಾರೆ.

ಶಾಸಕರು ಪ್ರವಾಸ ಹೋಗುವುದು ದೊಡ್ಡ ಅಪರಾಧವೇನಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರಾಜ್ಯದಲ್ಲಿ ಹೆಚ್ಚು ಬರಗಾಲವಿಲ್ಲ. ಹೀಗಾಗಿ ನಾವು ಪ್ರವಾಸ ಕೈಗೊಳ್ಳುವುದು ಖಚಿತ ಎಂದಿದ್ದಾರೆ.

ಅಷ್ಟಕ್ಕು ವಿದೇಶ ಪ್ರವಾಸ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರವಲ್ಲ. ಬಿಜೆಪಿ ಸರ್ಕಾರವಿದ್ದಾಗಲೂ ಎರಡು ಬಾರಿ ಶಾಸಕರು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಮಾಲೀಕಯ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಮಧ್ಯೆ ಶಾಸಕರ ವಿದೇಶ ಪ್ರವಾಸಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ಒಂದು ತಂಡದ ವಿದೇಶ ಪ್ರವಾಸ ರದ್ದಾಗಿದ್ದು, ಮಾಲೀಕಯ್ಯ ನೇತೃತ್ವದ ತಂಡದ ಪ್ರವಾಸ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಲೀಕಯ್ಯ ಗುತ್ತೇದಾರ್, ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಪ್ರವಾಸದ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಆದರೆ ಪ್ರವಾಸ ರದ್ದು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಹೊಸತಲ್ಲ. ಪ್ರವಾಸದ ಬಗ್ಗೆ ವಿಧಾನಸಭೆ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ ಮತ್ತು ಅದರಲ್ಲಿ ವಿಶೇಷ ಏನು ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement