ಮೆಟ್ರೋದಲ್ಲಿ ಕೇಜ್ರಿವಾಲ್ ಪ್ರಯಾಣ
ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ತಮ್ಮ ಎಲ್ಲ ಶಾಸಕರೊಂದಿಗೆ ಮೆಟ್ರೋ ರೈಲಿನಲ್ಲಿ ತೆರಳುವುದಾಗಿ ಶುಕ್ರವಾರ ತಿಳಿಸಿದ್ದಾರೆ.
ಇಂದು ಕೌಶಾಂಬಿಯಾದಲ್ಲಿ ಜನತಾ ದರ್ಬಾರ್ ನಡೆಸಿದ ವೇಳೆ ಕೇಜ್ರಿವಾಲ್ ಈ ವಿಷಯವನ್ನು ತಿಳಿಸಿದ್ದಾರೆ. ನಿಯೋಜಿತ ಮುಖ್ಯಮಂತ್ರಿ ಅಲ್ಲದೆ ಪಕ್ಷದ ಇತರ ಶಾಸಕರು ಸಹ ಪ್ರಮಾಣವಚನ ಕಾರ್ಯಕ್ರಮಕ್ಕೆ ಮೆಟ್ರೊ ರೈಲಿನಲ್ಲೆ ತೆರಳಲಿದ್ದಾರೆ ಎಂದರು.
ಜನತಾ ದರ್ಬಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿನ ವ್ಯವಸ್ಥೆ ತೀರ ಹದಗೆಟ್ಟು ಹೋಗಿದೆ ಇಂತಹ ವಾತಾವರಣದಿಂದ ಜನರು ಉಸಿರುಗಟ್ಟುವಂತಾಗಿದೆ. ಹೀಗಾಗಿ ಜನರು ಮುಖ್ಯಮಂತ್ರಿಗಳ ಬಳಿಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಜನರು ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಸಿಎಂ ಬಳಿಗೆ ಬರುವುದು ತುಂಬಾ ದುಃಖದ ವಿಚಾರ. ಜನರ ಸಮಸ್ಯೆಗಳನ್ನು ನಿವಾರಿಸುವುದು ಮುಖ್ಯವಾಗಿದೆ. ಅಲ್ಲದೆ ಜನರ ನಿರೀಕ್ಷೆಗಳು ಸಹ ಹೆಚ್ಚಿದ್ದು, ನಾವು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಜನರು ಹೊತ್ತು ತರುವ ಸಮಸ್ಯೆಗಳನ್ನು ಸ್ವತಃ ಆಲಿಸಿ, ಜನರ ಜೊತೆಯಲ್ಲೇ ಹೋಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.