ರಾಜ್ಯಪಾಲ ಸ್ಥಾನದಿಂದ ಹಿಂದೆ ಸರಿಯಲು ನಿರ್ಧಾರ: ಭಾರದ್ವಾಜ್
ಶಾಸಕರ ವಿದೇಶ ಪ್ರವಾಸದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ರಾಜ್ಯಪಾಲ ಸ್ಥಾನದಿಂದಲೇ ತಾವು ಹಿಂದೆ ಸರಿಯ..
ಮೈಸೂರು: ಶಾಸಕರ ವಿದೇಶ ಪ್ರವಾಸದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ರಾಜ್ಯಪಾಲ ಸ್ಥಾನದಿಂದಲೇ ತಾವು ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ನಾನು ಶಾಸಕರ ಬಗ್ಗೆ ಏನು ಮಾತನಾಡುವುದಿಲ್ಲ. ರಾಜ್ಯದಲ್ಲಿ ರಾಜ್ಯಪಾಲರ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ತಾವು ಯಾರಿಗೂ ಸಲಹೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ರಾಜ್ಯಪಾಲರು ಬೇಡವೇ ಬೇಡ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಥಹ ರಾಜ್ಯದಲ್ಲಿ ಎಷ್ಟು ದಿನ ಕೆಲಸ ಮಾಡಲು ಸಾಧ್ಯ ಹೇಳಿ? ಅಲ್ಲದೆ ರಾಜ್ಯದಲ್ಲಿ ಪ್ರಚಲಿತ ಬೆಳವಣಿಗೆಗಳು ಬೇಸರ ತಂದಿವೆ. ಹೀಗಾಗಿ ತಾವು ರಾಜ್ಯಪಾಲ ಸ್ಥಾನದಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸಚಿವರು ಕೆಲಸ ಮಾಡಿಲ್ಲವೆಂದರೆ ಸಿಎಂಗೆ ಪತ್ರ ಬರೆಯುತ್ತೇನೆ. ಆದರೆ ಶಾಸಕರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು. ಚುನಾಯಿತ ಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು. ಆದರೆ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳತ್ತ ಗಮನ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ತಮ್ಮ ಜವಾಬ್ದಾರಿ ಅರ್ಥಮಾಡಿಕೊಂಡು, ತಮ್ಮ ಕಾರ್ಯವೈಖರಿ ಬಗ್ಗೆ ತಾವೇ ಕೇಳಿಕೊಳ್ಳಬೇಕು ಎಂದರು.