ಶಾಸಕರ ವಿದೇಶ ಪ್ರವಾಸಕ್ಕೆ ರಾಹುಲ್ ಬ್ರೇಕ್
ತೀವ್ರ ವಿರೋಧ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ವಿದೇಶ ಪ್ರವಾಸಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬ್ರೇಕ್ ಹಾಕಿದ್ದಾರೆ.
ನವದೆಹಲಿ: ತೀವ್ರ ವಿರೋಧ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ವಿದೇಶ ಪ್ರವಾಸಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಬ್ರೇಕ್ ಹಾಕಿದ್ದಾರೆ.
ಅಧ್ಯಯನದ ಹೆಸರಿನಲ್ಲಿ ಶಾಸಕರ ವಿದೇಶ ಪ್ರವಾಸಕ್ಕೆ ಅವರು ಪ್ರತಿನಿಧಿಸುವ ಕ್ಷೇತ್ರದ ಜನತೆಯಿಂದ ಮಾತ್ರವಲ್ಲದೆ, ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಶಾಸಕರಿಗೆ ವಿದೇಶ ಪ್ರವಾಸ ಕೈಗೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶ ನೀಡಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಪ್ರವಾಸಕ್ಕೆ ತಡೆ ನೀಡುವಂತೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಶಾಸಕರ ವಿದೇಶ ಪ್ರವಾಸದ ಬಗ್ಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸಹ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ನಾನು ಶಾಸಕರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಶಾಸಕರು ತಮ್ಮ ಕಾರ್ಯವೈಖರಿ ಬಗ್ಗೆ ತಾವೇ ಕೇಳಿಕೊಳ್ಳಬೇಕು. ಅವರು ತಮ್ಮ ಕ್ಷೇತ್ರದ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಬೇಸರದಿಂದ ನುಡಿದರು.
ಪ್ರವಾಸ ಹೋಗದಂತೆ ಮನವಿ ಮಾಡುತ್ತೇನೆ: ಎಚ್ಡಿಕೆ
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಸರಿಯಲ್ಲ. ಹೀಗಾಗಿ ನನ್ನ ಪಕ್ಷದ ಶಾಸಕರಿಗೆ ವಿದೇಶ ಪ್ರವಾಸ ಹೋಗಬೇಡಿ ಎಂದು ಮನವಿ ಮಾಡುವುದಾಗಿ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಒಂದು ವೇಳೆ ಪ್ರವಾಸ ಹೋಗುವುದೇಯಾದರೆ, ಶಾಸಕರು ತಮ್ಮ ಸ್ವಂತ ಹಣದಿಂದ ವಿದೇಶ ಪ್ರವಾಸಕ್ಕೆ ಹೋಗಲಿ ಎಂದು ಎಚ್ಡಿಕೆ ಹೇಳಿದ್ದಾರೆ.
ವಿಧಾನ ಮಂಡಲದ ಅಂದಾಜು ಸಮಿತಿಯ 18 ಸದಸ್ಯರು ಬ್ರೆಜಿಲ್, ಅರ್ಜಂಟೈನಾ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದಂತೆ, ಆ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬರಗಾಲವಿದೆ. ಕಬ್ಬು ಬೆಳೆಗಾರರ ಸಮಸ್ಯೆ ತಾರಕಕ್ಕೇರಿದೆ. ಸ್ಥಳೀಯ ಸಮಸ್ಯೆಗಳು ತಾಂಡವಾಡುತ್ತಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದಾಗ್ಯೂ ಕೇವಲ ಮೋಜು - ಮಸ್ತಿಗಾಗಿ 'ಅಧ್ಯಯನ'ದ ಹೆಸರು ಹೇಳಿಕೊಂಡು ವಿದೇಶಗಳಿಗೆ ಹೋಗುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ಹೋಗುವುದಿದ್ದರೆ ಅವರು ತಮ್ಮ ಸ್ವಂತ ಹಣದಲ್ಲಿ ಹೋಗಲಿ. ಒಂದು ವೇಳೆ, ಅಧ್ಯಯನಕ್ಕಾಗಿ ಹೋಗುವ ಹಾಗಿದ್ದರೆ ಹೋಗಲಿ. ಆದರೆ, ಅಲ್ಲಿ ಮೋಜು ಮಸ್ತಿಮಾಡುವುದು ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.