ಜಾಕ್ ಕಾಲಿಸ್ ಶತಕದ ವಿದಾಯ
ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾಕ್ ಕಾಲಿಸ್ ಅವರು ಅಂತಿಮ...
ಡರ್ಬನ್: ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾಕ್ ಕಾಲಿಸ್ ಅವರು ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.
ಡರ್ಬನ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಾಕ್ ಕಾಲಿಸ್ 274 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸಿದ್ದಾರೆ. ಇದರಲ್ಲಿ ಹದಿಮೂರು ಬೌಂಡರಿಗಳು ದಾಖಲಾಗಿವೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ಕಾಲಿಸ್ ಭಾರತದ ಬೌಲರ್‌ಗಳನ್ನು ತೀವ್ರವಾಗಿ ಕಾಡಿದರು. ದಕ್ಷಿಣ ಆಫ್ರಿಕಾದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕಾಲಿಸ್ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡುತ್ತಿದ್ದಾರೆ.
ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕಾಲಿಸ್ 45ನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ ಭಾರತದ ವಿರುದ್ಧ 7ನೇ ಶತಕ ಸಿಡಿಸಿದ ಕೀರ್ತಿಗೂ ಕಾಲಿಸ್ ಭಾಜನರಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 334 ರನ್‌ಗಳನ್ನು ದಾಖಲಿಸಿತ್ತು. ನಂತರ ಬ್ಯಾಂಟಿಗ್ ಆರಂಭಿಸಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮ್ಯಾನ್‌ಗಳು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಿನ್ನೆ ವರುಣನ ಕಾಟದಿಂದಾಗಿ ಪಂದ್ಯ ಅಪೂರ್ಣವಾಗಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಜಾಕ್ ಕಾಲಿಸ್ ಅಜೇಯ 78 ರನ್ ದಾಖಲಿಸಿ ಶತಕದ ಸಮೀಪದಲ್ಲಿದ್ದರು.
ಇಂದು ನಾಲ್ಕನೇ ದಿನದಾಟ ಮುಂದುವರೆಸಿದ ಕಾಲಿಸ್ ಅಜೇಯ 22 ರನ್ ಗಳಿಸಿ ಶತಕ ಪೂರೈಸಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿ ಸುಸ್ಥಿತಿಯಲ್ಲಿದ್ದು, 34 ರನ್‌ಗಳ ಮುನ್ನಡೆ ಸಾಧಿಸಿದೆ.