ಜಾರ್ಖಂಡ್ನಲ್ಲಿ ಬಿಜೆಪಿಗೆ ಗೆಲುವು ಖಚಿತ: ಮೋದಿ
ಕಾಂಗ್ರೆಸ್ನ ಭ್ರಷ್ಟಾಚಾರದಿಂದ ಬೇಸತ್ತಿರುವ ದೇಶದ ಜನತೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು...
ರಾಂಚಿ: ಕಾಂಗ್ರೆಸ್ನ ಭ್ರಷ್ಟಾಚಾರದಿಂದ ಬೇಸತ್ತಿರುವ ದೇಶದ ಜನತೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಂಚಿಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದರು. ಅಲ್ಲದೆ ಕಾಂಗ್ರೆಸ್ ಕೇವಲ ಹಣ ಲೂಟಿ ಮಾಡುವಲ್ಲಿ ತೊಡಗಿಕೊಂಡಿದೆ ಎಂದು ಕಿಡಿಕಾರಿದರು. ದೇಶದ ಜನತೆ ಕಾಂಗ್ರೆಸ್ನ ಭ್ರಷ್ಟಾಚಾರದಿಂದ ಬೇಸತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್ನ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದ್ದರು ಅದನ್ನು ಬಳಿಸಿಕೊಂಡು ಉತ್ತಮ ಯೋಜನೆ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಾರ್ಖಂಡ್ನಲ್ಲಿ ಕಲ್ಲಿದ್ದಲು ನಿಕ್ಷೇಪವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರೆ ರಾಜ್ಯ ವಿದ್ಯುತ್ ಕೊರತೆ ಎದುರಿಸಬೇಕಾಗಿರಲಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ಇದೇ ವೇಳೆ, ಜಾರ್ಖಂಡ್ ರಾಜ್ಯ ರಚನೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರ ದೊಡ್ಡದು. ಜಾರ್ಖಂಡ್ ಅಭಿವೃದ್ಧಿ ವಾಜಪೇಯಿಯವರ ಕನಸಾಗಿತ್ತು. ಆದರೆ ವಾಜಪೇಯಿ ಅವರು ಕನಸು ಕನಸಾಗೆ ಇದೆ. ಹೀಗಾಗಿ ವಾಜಪೇಯಿ ಕನಸು ನನಸು ಮಾಡಲು ಹಾಗೂ ಜಾರ್ಖಂಡ್ನ್ನು ಅಭಿವೃದ್ಧಿ ಪತದಲ್ಲಿ ಮುನ್ನಡೆಸಲು ನಾನು ಹೋರಾಡುತ್ತೇನೆ ಎಂದು ಮೋದಿ ಭರವಸೆ ನೀಡಿದರು.
ಜಾರ್ಖಂಡ್ ಪ್ರತಿಭಾವಂತರ ಪುಣ್ಯ ಭೂಮಿ: ರಾಜನಾಥ್ ಸಿಂಗ್
ಜಾರ್ಖಂಡ್ ಪ್ರತಿಭಾವಂತರ ಪುಣ್ಯ ಭೂಮಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ರಾಂಚಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಹೆಚ್ಚು ಪ್ರತಿಭಾವಂತರನ್ನು ಹೊಂದಿರುವ ಪುಣ್ಯ ಭೂಮಿ ಎಂದು ಹೇಳಿದ್ದಾರೆ.
ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆ ಮಾಡುವಂತೆ ರಾಜ್ಯದ ಜನತೆ ಮನವಿ ಮಾಡಿದಾಗ, ಆ ವೇಳೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ರಾಜ್ಯ ರಚನೆ ಮಾಡಿ ಜಾರ್ಖಂಡ್ಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ್ದರು ಎಂದು ರಾಜನಾಥ್ ಸಿಂಗ್ ತಿಳಿಸಿದರು.