ನಾಂದೇಡ್ ಎಕ್ಸ್ಪ್ರೆಸ್ ರೈಲು ದುರಂತದ ಹಿಂದೆ ಉಗ್ರರ ಸಂಚು?
ಹೈದರಾಬಾದ್: 26 ಮಂದಿಯನ್ನು ಬಲಿತೆಗೆದುಕೊಂಡ ಬೆಂಗಳೂರು-ನಾಂದೇಡ್ ಎಕ್ಸ್ಪ್ರೆಸ್ ರೈಲು ದುರಂತದ ಹಿಂದೆ ಉಗ್ರರ ಸಂಚು ಕುರಿತು ಶಂಕೆ ವ್ಯಕ್ತವಾಗತೊಡಗಿದೆ.
ಬೆಂಕಿಗಾಹುತಿಯಾದ ಎಸಿ ಬೋಗಿಗಳ ಪರಿಶೀಲನೆ ನಡೆಸಿದ ವಿಧಿವಿಜ್ಞಾನ ತಜ್ಞರಿಗೆ ಇಂಥದ್ದೊಂದು ಅನುಮಾನ ಈಗ ಕಾಡಲು ಶುರುವಾಗಿದೆ. ಬೋಗಿಯಿಂದ ಸಂಗ್ರಹಿಸಲಾದ ಕೆಲವು ಸ್ಯಾಂಪಲ್ಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಚೆನ್ನೈಗೆ ಕಳುಹಿಸಿ ಕೊಡಲಾಗಿದೆ.
ಮೂಲಗಳ ಪ್ರಕಾರ, ಬೆಂಗಿಗಾಹುತಿಯಾದ ಬೋಗಿಯೊಂದರ ಸೀಟ್ನಂ.7ರ ಬಳಿ ನಾಲ್ಕು ಅಡಿ ಅಗಲದ ರಂಧ್ರವೊಂದು ಪತ್ತೆಯಾಗಿದೆ. ಸ್ಫೋಟಕ ಅಥವಾ ಇತರೆ ದಹ್ಯ ವಸ್ತುಗಳಿಂದ ಈ ರೀತಿಯ ರಂಧ್ರಗಳು ಸೃಷ್ಟಿಯಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ.
ಬೆಂಕಿಯು ಬೋಗಿಯ ನೆಲಭಾಗದಿಂದ ಹುಟ್ಟಿಕೊಂಡಿದೆ. ಅಲ್ಲದೆ, ಬೆಂಕಿ ಹುಟ್ಟಿಕೊಂಡ ಪ್ರದೇಶ ಸಂಪೂರ್ಣವಾಗಿ ಸುಟ್ಟುಭಸ್ಮವಾಗಿದೆ. ಸಾಮಾನ್ಯವಾಗಿ ಶಾರ್ಟ್ಸರ್ಕ್ಯೂಟ್ ಸಂಭವಿಸಿದಾಗ ಬೆಂಕಿಯು ಚಾವಣಿಯಿಂದ ಹಬ್ಬುತ್ತದೆ. ಇಷ್ಟಾದರೂ ರಾಸಾಯನಿಕ ಪರೀಕ್ಷೆಯ ವರದಿ ಬರುವವರೆಗೆ ಯಾವುದೇ ತೀರ್ಮಾನಕ್ಕೆ ಬರದಿರಲು ತಜ್ಞರು ನಿರ್ಧರಿಸಿದ್ದಾರೆ.