ಬೇಷರತ್ ಬಿಜೆಪಿ ಸೇರುತ್ತಿದ್ದೇನೆ: ಬಿಎಸ್ವೈ
ಯಾವುದೇ ಷರತ್ತು ವಿಧಿಸದೇ ಬೇಷರತ್ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಕೆಜೆಪಿ ಅಧ್ಯಕ್ಷ..
ಶಿವಮೊಗ್ಗ: ಯಾವುದೇ ಷರತ್ತು ವಿಧಿಸದೇ ಬೇಷರತ್ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, ಸೊರಬದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿಗೆ ವಾಪಸ್ಸಾಗುವ ನಿರ್ಧಾರ ತೆಗೆದುಕೊಂಡಿದ್ದೇನೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಯಾವುದೇ ಷರತ್ತಿಲ್ಲದೆ ಮಾತೃ ಪಕ್ಷಕ್ಕೆ ಮರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಯಾವುದೇ ಸ್ಥಾನಮಾನದ ಆಕಾಂಕ್ಷೆಯಿಂದ ಬಿಜೆಪಿ ಸೇರುತ್ತಿಲ್ಲ. ಪಕ್ಷವನ್ನು ಬಲಪಡಿಸಲು ಬಿಜೆಪಿ ಸೇರುತ್ತಿದ್ದೇನೆ. ಹೀಗಾಗಿ ತಕ್ಷಣವೇ ನನಗೆ ಯಾವುದೇ ಸ್ಥಾನಮಾನ ಬೇಡ. ಸಕ್ರಿಯ ಬಿಜೆಪಿ ನಾಯಕನಾದ ನಂತರ ಸ್ಥಾನ ಮಾನ ನೀಡಲಿ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಯೋಗ ಗುರು ಬಾಬಾ ರಾಮ್ದೇವ್ ಸೇರಿದಂತೆ ಹಲವು ಮಠಾಧೀಶರು ಬಿಜೆಪಿ ಸೇರುವಂತೆ ತಮಗೆ ಸಲಹೆ ನೀಡಿದ್ದರು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಕೆಜೆಪಿ ವಿಲೀನ
ನಿನ್ನೆಯಷ್ಟೆ ಇದು ಕೆಜೆಪಿಯ ಕೊನೆಯ ಸಭೆ ಎಂದು ಹೇಳಿದ್ದ ಯಡಿಯೂರಪ್ಪ ಇಂದು, ಬಿಜೆಪಿಯೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.