ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆ
ಹಾಲು ಒಕ್ಕೂಟ ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆ ನೀಡಿದ್ದು, ಜನವರಿ 1ರಿಂದ ರೈತರಿಗೆ ಪ್ರತಿ..
ಬೆಂಗಳೂರು: ಹಾಲು ಒಕ್ಕೂಟ ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆ ನೀಡಿದ್ದು, ಜನವರಿ 1ರಿಂದ ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರುಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಸಾಮಾನ್ಯ ಹಾಲಿನ ಮಾರಾಟ ದರಕ್ಕಿಂತ ಹೆಚ್ಚು ದರ ಹಾಲು ಉತ್ಪಾದಕರಿಗೆ ಸಿಗಲಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಹಾಲು ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಅವಿಭಜಿತ ಕೋಲಾ ಜಿಲ್ಲೆಯ ರೈತರು ಈ ದರ ಏರಿಕೆ ಲಾಭ ಪಡೆಯಲಿದ್ದಾರೆ.
ಪ್ರಸ್ತುತ ಹಾಲು ಒಕ್ಕೂಟಗಳಿಂದ ಈ ಜಿಲ್ಲೆಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ 25 ನೀಡಲಾಗುತ್ತಿತ್ತು. ಜನವರಿ 1ರಿಂದ ಇನ್ನೂ 2 ಹೆಚ್ಚಳ ಅಂದರೆ 27 ಸಿಗಲಿದೆ. ಇದರ ಜತೆಗೆ ಸರ್ಕಾರ ನೀಡುವ ಪ್ರೋತ್ಸಾಹಧನ 4 ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ 31 ಸಿಗುತ್ತದೆ. ಆದರೆ, ಸಾಮಾನ್ಯ ಹಾಲಿನ ಮಾರಾಟ ದರ 30. ಕೆಎಂಎಫ್ ಅಂಗಸಂಸ್ಥೆಗಳಾಗಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬೆಂಗಳೂರು ಡೇರಿ) ಮತ್ತು ಕೋಲಾರ ಹಾಲು ಒಕ್ಕೂಟ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ 2 ರುಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ, ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ.
ಮಾರಾಟ ದರದಲ್ಲಿ ಬದಲಾವಣೆ ಇಲ್ಲ: ಸೆಪ್ಟೆಂಬರ್‌ನಲ್ಲಿ ಹಾಲು ಮಾರಾಟ ದರ ಏರಿಸಿದ್ದು, ಆ ಸಂದರ್ಭದಲ್ಲಿ ರೈತರಿಗೆ ಪಾಲು ನೀಡದ ಕಾರಣ ಇದೀಗ ರೈತರಿಗೆ ಆ ಮೊತ್ತವನ್ನು ಪಾವತಿಸಲಾಗುತ್ತಿದೆ. ಹೀಗಾಗಿ ಹಾಲು ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹಾಲು ಒಕ್ಕೂಟಗಳು ಸ್ಪಷ್ಟಪಡಿಸಿವೆ.