ಪ್ರಧಾನಿ ರಾಜಿನಾಮೆ? ರಾಹುಲ್ ಗಾಂಧಿಗೆ ಪಟ್ಟ?
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಜನವರಿ 3ರಂದು ರಾಜಿನಾಮೆ ನೀಡುವ ಸಾಧ್ಯತೆ..
ನವದೆಹಲಿ: ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಜನವರಿ 3ರಂದು ರಾಜಿನಾಮೆ ನೀಡುವ ಸಾಧ್ಯತೆ ಇದ್ದು, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಪಟ್ಟ ಕಟ್ಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ ಸಿಂಗ್ ರಾಜಿನಾಮೆಯನ್ನು ತಳ್ಳಿಹಾಕಿರುವ ಪ್ರಧಾನಿ ಕಾರ್ಯಾಲಯ, ಪ್ರಧಾನಿ ಸಿಂಗ್ ಅವರು ಜನವರಿ 3ರಂದು ಬೆಳಗ್ಗೆ 11ಗಂಟೆಗೆ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ, ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ ಎಂದು ತಿಳಿಸಿದೆ.
ಪ್ರಧಾನಿ ಸಿಂಗ್ ಅವರು ತಮ್ಮ ಹತ್ತು ವರ್ಷಗಳ ಆಡಳಿತವದಿಯಲ್ಲಿ ನಡೆಸುತ್ತಿರುವ ಎರಡನೇ ಸುದ್ದಿಗೋಷ್ಠಿ ಇದಾಗಿದ್ದು, ಈ ಮುಂಚೆ 2009ರ ಮೇನಲ್ಲಿ ದೃಶ್ಯ ಮಾಧ್ಯಮದ ಐವರು ಸಂಪಾದಕರೊಂದಿಗೆ ಮಾಧ್ಯಮ ಸಂವಾದ ನಡೆಸಿದ್ದರು.
2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಉದ್ದೇಶದಿಂದ ಜನವರಿ 17ಕ್ಕೆ ಕಾಂಗ್ರೆಸ್ ಸಮಿತಿ ಸಭೆ ಕರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಿಂಗ್ ಅವರು ಜನವರಿ 3ಕ್ಕೆ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದೇ ವೇಳೆ ಪ್ರಧಾನಿ ತಮ್ಮ ರಾಜಿನಾಮೆ ಪ್ರಕಟಿಸಿ, ಪ್ರಧಾನಿ ಸ್ಥಾನಕ್ಕೆ ರಾಹುಲ್ ಹೆಸರು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನಿ ಸಿಂಗ್ ಅವರು, 2014ಕ್ಕೆ ರಾಹುಲ್ ಗಾಂಧಿ ಒಬ್ಬ ಮಾದರಿಯ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ವರ್ಣಿಸಿದ್ದರು. ಅಲ್ಲದೆ ತಾವು ರಾಹುಲ್ ಕೈ ಕೆಳಗೆ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದರು.
ಮುಂದಿನ ಲೋಕಸಭೆ ಚುನಾವಣೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಎದುರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ, ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನೇ ಪಕ್ಷದ ನಾಯಕರನ್ನಾಗಿ ಬಿಂಬಿಸುವ ಯತ್ನಗಳು ನಡೆದಿವೆ ಎನ್ನಲಾಗಿದೆ.