ವಿದ್ಯುತ್ ದರ ಶೇ. 50ರಷ್ಟು ಇಳಿಕೆ: ಕೇಜ್ರಿವಾಲ್
ದೆಹಲಿ ನಾಗರಿಕರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿನ ವಿದ್ಯುತ್ ದರವನ್ನು...
ನವದೆಹಲಿ: ದೆಹಲಿ ನಾಗರಿಕರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿನ ವಿದ್ಯುತ್ ದರವನ್ನು ಶೇ. 50ರಷ್ಟು ಇಳಿಕೆ ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಮತ್ತೊಂದು ಭರವಸೆಯನ್ನು ಈಡೇರಿಸಿದೆ. ನಿನ್ನೆಯಷ್ಟೇ ದೆಹಲಿ ನಾಗರಿಕರಿಗೆ ಪ್ರತಿನಿತ್ಯ 700 ಲೀಟರ್ ನೀರು ಸರಬರಾಜು ಮಾಡುವ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಮತ್ತೊಂದು ಭರವಸೆಯನ್ನು ಕೇಜ್ರಿವಾಲ್ ಪೂರೈಸಿದ್ದಾರೆ.
ದೆಹಲಿಯಲ್ಲಿ ವಿದ್ಯುತ್ ದರ ಶೇ. 50ರಷ್ಟು ಇಳಿಕೆ ಮಾಡಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಅಲ್ಲದೆ ಸುಮಾರು 400 ಯೂನಿಟ್ ಬಳಕೆವರೆಗೆ ಶೇ. 50ರಷ್ಟು ದರ ಕಡಿತ ಮಾಡಲಾಗಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯುತ್ ಪರಿಷ್ಕೃತ ದರದ ಅನುಕೂಲವನ್ನು ಸುಮಾರು 28 ಲಕ್ಷ ನಾಗರಿಕರು ಪಡೆಯಲಿದ್ದಾರೆ. ವಿದ್ಯುತ್ ಕಂಪನಿಗಳ ಆಡಿಟ್‌ಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು, ಆಡಿಟ್‌ಗಾಗಿ ವಿದ್ಯುತ್ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ. ವಿದ್ಯುತ್ ಕಂಪನಿಗಳಿಂದ ಆಡಿಟ್ ವರದಿ ಸಲ್ಲಿಕೆ ನಂತರ ಮತ್ತಷ್ಟು ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.