ಲೈಂಗಿಕ ದೌರ್ಜನ್ಯ ತಿದ್ದುಪಡಿ ಮಸೂದೆಗೆ ಮಹಿಳಾ ಸಂಘ ವಿರೋಧ
ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಅಂಗೀಕಾರವಾದ ಮಹಿಳಾ ಲೈಂಗಿಕ ದೌರ್ಜನ್ಯ ತಿದ್ದುಪಡಿ ಮಸೂದೆಗೆ ಸಹಿ ಹಾಕಬಾರದು ಎಂದು ರಾಷ್ಟ್ರಪತಿಗಳಿಗೆ ಮಹಿಳಾ ಸಂಘ ಶನಿವಾರ ಒತ್ತಾಯಿಸಿದೆ.
ಶುಕ್ರವಾರ ಕೇಂದ್ರ ಸಚಿವ ಸಂಪುಟದಲ್ಲಿ ಅಂಗೀಕಾರವಾದ ಮಹಿಳಾ ಲೈಂಗಿಕ ದೌರ್ಜನ್ಯ ಕಾಯ್ದೆ ತಿದ್ದುಪಡಿಗೆ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಮಾನವ ಹಕ್ಕು ವಕೀಲೆ ವೃಂದಾ ಗ್ರೋವರ್ ಅವರು ಈ ತಿದ್ದುಪಡಿ ಕಾಯ್ದೆಗೆ ವಿರೋಧಿಸಿದ್ದು, ರಾಷ್ಟ್ರಪತಿಗಳು ಇದಕ್ಕೆ ಸಹಿಹಾಕಬಾರದು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಈ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದು, ನ್ಯಾಯಾಮೂರ್ತಿ ವರ್ಮಾ ಸಮಿತಿ ಮಾಡಿದಂತ ಪ್ರಮುಖ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಅಪರಾಧಿಗಳಿಗೆ ಭಯ ಹುಟ್ಟಿಸುವಂತಹ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.