ಶಿಂಧೆ ವಿರುದ್ಧ ದೇಶದ್ರೋಹ ಕೇಸು ದಾಖಲಿಸಿ: ಬಿಜೆಪಿ ಒತ್ತಾಯ
ನವದೆಹಲಿ: ಹಿಂದೂ ಭಯೋತ್ಪಾದಕರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಶನಿವಾರ ಒತ್ತಾಯಿಸಿದೆ.
ಬಿಜೆಪಿ ಮತ್ತು ಆರ್ಎಸ್ಎಸ್ ಹಿಂದೂ ಭಯೋತ್ಪಾದಕರಿಗೆ ತರಬೇತಿ ನೀಡ್ತುತ್ತಿದೆ ಎಂದು ಹೇಳಿರುವ ಶಿಂಧೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಅಥವಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ಬಲಬಿರ್ ಪಂಜ್ ಆಗ್ರಹಿಸಿದ್ದಾರೆ.
ಸುಶೀಲ್ ಕುಮಾರ್ ಶಿಂಧೆ ಭಾರತದ ಗೃಹ ಸಚಿವರಲ್ಲ, ಪಾಕಿಸ್ತಾನದ ಏಜೆಂಟ್ ಮಾದರಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಸುಶೀಲ್ ಶಿಂಧೆ ಅವರ ವಿರುದ್ಧ ಕಪ್ಪು ಬಾವುಟ ಹಾರಿಸಲಾಗುವುದು. ಅವರು ಎಲ್ಲಿ ಭೇಟಿ ನೀಡುತ್ತಾರೋ ಅಲ್ಲಿ ನಡೆಯುವಂತಹ ಸಭೆಗಳನ್ನು ಬಹಿಷ್ಕರಿಸಲಾಗುವುದು ಎಂದು ಬಿಜೆಪಿ ನಾಯಕ ಅನಂತ್ ಕುಮಾರ್ ಹೇಳಿದ್ದಾರೆ.
ಶಿಂಧೆ ಅವರು ಕೂಡಲೇ ಕ್ಷಮೆಯಾಚಿಸಬೇಕು. ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳದೇ ಇದ್ದರೆ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ಶಿಂಧೆ ಅವರ ಹೇಳಿಕೆಯನ್ನು ಸಮಾಜವಾದಿ ಪಕ್ಷವು ಖಂಡಿಸಿದೆ.