ಕರ್ನಾಟಕದ ಬಿಜೆಪಿ ಅಸಮರ್ಥ: ಶುಕ್ಲಾ
ನವದೆಹಲಿ: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಾ(ಬಿಜೆಪಿ) ಅಸಮರ್ಥ ಎಂದು ಕೇಂದ್ರ ಸಚಿವ ರಾಜೀವ್ ಶುಕ್ಲಾ ಭಾನುವಾರ ಹೇಳಿದ್ದಾರೆ.
ಬಿಜೆಪಿ ಕರ್ನಾಟಕದಲ್ಲಿ ಅಸ್ಥಿರತೆ ಹುಟ್ಟು ಹಾಕುತ್ತಿದೆ ಎಂದ ಅವರು, ಇದರಿಂದಾಗಿ ರಾಜ್ಯದ ಆರ್ಥಿಕ ಮಟ್ಟ ಕುಗ್ಗುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಜನ ಪರದಾಡುವಂತಹ ಸ್ಥಿತಿ ಎದುರಾಗಿದೆ ಎಂದು ಶುಕ್ಲಾ ಆಪಾದಿಸಿದ್ದಾರೆ.
ರಾಜಕೀಯ ಜಂಜಾಟದಲ್ಲಿ ಸರ್ಕಾರದ ಕರ್ತವ್ಯಗಳನ್ನು ಬಿಜೆಪಿ ಮರೆತಿದೆ. ಕಳೆದ 3 ವರ್ಷಗಳಿಂದ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಇದನ್ನು ದುರಪಯೋಗ ಮಾಡಿಕೊಂಡು, ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಶಾಸಕರು 'ಮ್ಯೂಸಿಕಲ್ ಚೇರ್' ಆಟವನ್ನು ಆಡುತ್ತಿದ್ದಾರೆ. ಅವರಿಗೆ ಆಟವಾಡುವ ಅಭ್ಯಾಸವಿದೆಯೇ ಹೊರತು, ಜನರ ಸೇವೆ ಮಾಡುವುದಲ್ಲ ಎಂದು ವ್ಯಂಗ್ಯವಾಡಿದ್ದಾರೆ.