ಜಂಟಿ ಅಧಿವೇಶನ ಉದ್ದೇಶಿಸಿ ಭಾರದ್ವಾಜ್ ಭಾಷಣ, ಸರ್ಕಾರಕ್ಕೆ ಶಹಬ್ಬಾಸ್ಗಿರಿ
ಬಜೆಟ್ ಅಧಿವೇಶನ ಮೊದಲ ದಿನವಾದ ಸೋಮವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ವಿಧಾನ...
ಬೆಂಗಳೂರು: ಬಜೆಟ್ ಅಧಿವೇಶನ ಮೊದಲ ದಿನವಾದ ಸೋಮವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸರ್ಕಾರಕ್ಕೆ ಶಹಬ್ಬಾಸ್ಗಿರಿ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ರಾಜ್ಯದಲ್ಲಿ ಹಣಕಾಸು ಸ್ಥಿತಿ ಉತ್ತಮವಾಗಿದೆ. ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದೆ ಎಂದು ಭಾರದ್ವಾಜ್ ತಿಳಿಸಿದರು.
ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯಿಂದ ಅತಿ ಹೆಚ್ಚು ಜನರಿಗೆ ಅನುಕೂಲವಾಗಿದೆ. ವಿಪತ್ತು ನಿರ್ವಹಣಾ ಯೋಜನೆ ಯಶಸ್ವಿಯಾಗಿದೆ. ಅಲ್ಲದೆ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಗಣನೀಯ ಏರಿಕೆಯಾಗಿದೆ ಮತ್ತು ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ವೇಗ ಸಿಕ್ಕಿದೆ ಎಂದು ರಾಜ್ಯಪಾಲರು ಹೇಳಿದರು.
ತಲಾವಾರು ಯೋಜನಾ ವೆಚ್ಚ ದೇಶದಲ್ಲೇ ಅತಿ ಹೆಚ್ಚು ಇದ್ದು, ತೆರಿಗೆ ಸಂಗ್ರಹದಲ್ಲೂ ಗಣಿನೀಯ ಏರಿಕೆಯಾಗಿದೆ ಎಂದ ಭಾರದ್ವಾಜ್, ರೈತರಿಗಾಗಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಭೂ ಚೇತನಾ ಯೋಜನೆ ಇತರೆ ರಾಜ್ಯಗಳಿಗೂ ಮಾದರಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದ ನಂತರ ಅಧಿವೇಶನವನ್ನು ನಾಳೆಗೆ ಮುಂದೂಡಲಾಗಿದೆ.