ರಮ್ಯಾಗೆ ಮತ್ತೆ 'ನೀರ್ ದೋಸೆ' ಬೇಕಂತೆ
ನೀರ್ದೋಸೆ ಚಿತ್ರದಿಂದ ಹಿಂದೆ ಸರಿದಿದ್ದ ನಟಿ ರಮ್ಯಾ ಇದೀಗ ಮತ್ತೆ ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.
ಬೆಂಗಳೂರು: ನೀರ್ದೋಸೆ ಚಿತ್ರದಿಂದ ಹಿಂದೆ ಸರಿದಿದ್ದ ನಟಿ ರಮ್ಯಾ ಅವರು ಇದೀಗ ಮತ್ತೆ ನೀರ್ದೋಸೆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.
ಈ ಚಿತ್ರದಲ್ಲಿ ವೇಶ್ಯೆ ಪಾತ್ರ ನಿರ್ವಹಿಸಲಿರುವ ರಮ್ಯಾ, ಕಳೆದ ವಾರವಷ್ಟೇ ತಮಗೆ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವುದು ಸಾಧ್ಯವಿಲ್ಲ ಎಂದು ಹೇಳಿ ಚಿತ್ರದಿಂದ ಹಿಂದೆ ಸರಿದಿದ್ದರು.
ವಿಜಯ್ ಪ್ರಸಾದ್ ನಿರ್ದೇಶನದಲ್ಲಿ 'ದೋಸೆ' ಹುಯ್ಯಲು ಒಪ್ಪಿಕೊಂಡಿದ್ದ ರಮ್ಯಾ, ಆ ಚಿತ್ರಕ್ಕಾಗಿ 15 ಲಕ್ಷ ರುಪಾಯಿ ಸಂಭಾವನೆಯನ್ನು ಮುಂಗಡವಾಗಿ ಪಡೆದುಕೊಂಡಿದ್ದರು. ಈ ಮುಂಚೆ ಇದೇ ವಿಜಯ್ ಪ್ರಸಾದ್ ಅವರ 'ಸಿದ್ಲಿಂಗು' ಚಿತ್ರದ ಮೂಲಕ ಒಳ್ಳೆಯ ಹೆಸರು ತಂದುಕೊಟ್ಟಿದ್ದ ರಮ್ಯಾ, ಅವರದ್ದೇ ನಿರ್ದೇಶದ ನೀರ್ದೋಸೆ ಚಿತ್ರದ ಕಥೆ ಕೇಳಿ 'ವ್ಹಾವ್ ಸೂಪರ್' ಎಂದು ಮುಂಗಡವಾಗಿ ಸಂಭಾವನೆಯನ್ನೂ ಪಡೆದುಕೊಂಡರು. ಆದರೆ ಇದ್ದಕ್ಕಿದ್ದ ಹಾಗೆ 'ಈ ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನಿಂದ ಆಗೋಲ್ಲ' ಎಂದು 'ನೀರ್ ದೋಸೆ'ಗೆ ಎಳ್ಳುನೀರು ಬಿಡಲು ಮುಂದಾಗಿದ್ದರು.