ಅಫ್ಜಲ್‌ಗೆ ಗಲ್ಲು, ಜೈಲಲ್ಲೇ ಅಂತ್ಯಕ್ರಿಯೆ
ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ನವದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ಗೃಹ..
ನವದೆಹಲಿ: ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ನವದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಅಫ್ಜಲ್ ಗುರು ಗಲ್ಲು ಶಿಕ್ಷೆಯಿಂದ ವಿನಾಯತಿ ನೀಡುವಂತೆ ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ರಾಷ್ಟ್ರಪತಿ ಅವರು ಇತನ ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನವದೆಹಲಿಯ ತಿಹಾರ್ ಜೈಲಿನ ಕೋಣೆ ನಂ.3ರಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಜೈಲಿನ ಅಧಿಕಾರಿಗಳು ಗಲ್ಲಿಗೇರಿಸಿದ್ದಾರೆ. ನಂತರ ಜೈಲಿನಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ.
ಜೈಶ್-ಇ-ಮೊಹ್ಮದ್ ಸಂಘಟನೆ ಕಾರ್ಯಕರ್ತನಾದ ಅಫ್ಜಲ್ ಗುರು, 2001 ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದನು. ದಾಳಿಯಲ್ಲಿ 9 ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು. ಅಫ್ಜಲ್ ಗುರುವನ್ನು ಗಲ್ಲಿಗೇರಿಸುವ ಮಾಹಿತಿಯನ್ನು ಅವರ ಕುಟುಂಬದವರೆಗೆ ನಿನ್ನೆ ರಾತ್ರಿಯೇ ತಿಳಿಸಲಾಗಿತ್ತು.
ಅಫ್ಜಲ್ ಗುರುವಿನ ಗಲ್ಲಿನ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿದ್ದು, ಮುಂಬೈ, ದೆಹಲಿ, ಬೆಂಗಳೂರು, ಚೆನೈ, ಕೋಲ್ಕತ್ತಾ ಸೇರಿದಂತೆ ಹಲವು ಮಹಾನಗರಗಳಲ್ಲಿ ಹೈ ಅಲರ್ಟ್ ಘೋಘಿಸಲಾಗಿದೆ.
ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ಜನಿಸಿದ ಗುರು, ಎಂಬಿಬಿಎಸ್ 4ನೇ ಸೇಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. 2000ರಿಂದ ಜೈಶ್-ಇ-ಮೊಹ್ಮದ್ ಸಂಘಟನೆ ಸದಸ್ಯತ್ವ ಹೊಂದಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಎಂದು ಹೇಳಲಾಗಿದೆ.