ಸಿಬಿಐ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ: ಆಂಟನಿ
ಅತಿ ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಿಲಾಗಿದ್ದು, ತನಿಖೆಯ ನಂತರ...
ನವದೆಹಲಿ: ಅತಿ ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಿಲಾಗಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಬುಧವಾರ ಹೇಳಿದ್ದಾರೆ.
ನಗರದಲ್ಲಿ ಹಗರಣದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಂಟನಿ, ನಾನು ನ್ಯಾಯಾಧೀಶ ಅಲ್ಲ. ಪ್ರಕರಣವನ್ನು ನಿನ್ನೆಯೇ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಮತ್ತು ಆದಷ್ಟು ಬೇಗ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಮನವಿ ಮಾಡಲಾಗಿದೆ. ಹೀಗಾಗಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಹಗರಣದಲ್ಲಿ ಭಾಗಿಯಾಗಿರುವ ಆರು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಇಟಲಿಯ ಹೆಲಿಕಾಪ್ಟರ್ ತಯಾರಿಕಾ ಕಂಪನಿ ಫಿನ್ಮೆಕಾನಿಕಾ ಜತೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ಈ ಹಗರಣ ಸಂಬಂಧ ಇಟಲಿಯಲ್ಲಿ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆಯಾದ ಫಿನ್ಮೆಕಾನಿಕಾ ಕಂಪನಿ ಮುಖ್ಯಸ್ಥ ಗಿಸೆಪ್ಪಿ ಓರ್ಸಿಯನ್ನು ನಿನ್ನೆ ಬಂಧಿಸಲಾಗಿದೆ.
ಒಪ್ಪದಂತೆ ಪಿನ್ಮೆಕಾನಿಕಾ ಕಂಪನಿಯ ಮೂರು ಹೆಲಿಕಾಪ್ಟರ್‌ಗಳು ಈಗಾಗಲೇ ಭಾರತಕ್ಕೆ ಬಂದಿವೆ. ಇನ್ನು 9 ಹೆಲಿಕಾಪ್ಟರ್ ಕೆಲ ತಿಂಗಳಲ್ಲೇ ಬರಬೇಕಿತ್ತು. ಆದರೆ ಭಾರತ ಸರ್ಕಾರ ಆ ಕಂಪನಿಯೊಂದಿಗಿನ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದು, ಉಳಿದ 9 ಕಾಪ್ಟರ್‌ಗಳನ್ನು ಕಳುಹಿಸಬೇಡಿ ಎಂದು ಸೂಚಿಸಿದೆ.