ಅಫ್ಜಲ್ ಮೃತದೇಹದ ಬಗ್ಗೆ ಸಂಸತ್ ತೀರ್ಮಾನಿಸಲಿ: ಪ್ರಧಾನಿ
ನವದೆಹಲಿ: ಅಫ್ಜಲ್ ಗುರುವಿನ ಮೃತದೇಹವನ್ನು ಜಮ್ಮು ಕಾಶ್ಮೀರಕ್ಕೊಯ್ಯಲು ನಮಗೆ ಅನುಮತಿ ನೀಡಬೇಕೆಂದು ಅಫ್ಜಲ್ಗುರುವಿನ ಕುಟುಂಬ ಒತ್ತಾಯಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮನಮೋಹನ್ ಸಿಂಗ್ ಅಫ್ಜಲ್ ಮೃತದೇಹದ ಬಗ್ಗೆ ಸಂಸತ್ ತೀರ್ಮಾನಿಸಲಿ ಎಂದು ಹೇಳಿದ್ದಾರೆ.
ಅಫ್ಜಲ್ ಗುರುವಿನ ಪತ್ನಿ ತಬಸ್ಸುಮ್ ತನ್ನ ಪತಿಯ ಮೃತದೇಹವನ್ನು ನೀಡಬೇಕೆಂದು ಜಮ್ಮು ಕಾಶ್ಮೀರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಳು. ಈ ಪತ್ರವನ್ನು ಜಮ್ಮು ಕಾಶ್ಮೀರ ಸರ್ಕಾರ ಬಾರಮುಲ್ಲಾದ ಡೆಪ್ಯುಟಿ ಕಮಿಷನರ್ಗೆ ಕಳುಹಿಸಿತ್ತು.
ಆದರೆ ಅಫ್ಜಲ್ ಗುರುವಿನ ಮೃತದೇಹವನ್ನು ತಿಹಾರ್ ಜೈಲಿನಲ್ಲೇ ದಫನ ಮಾಡಲಾಗಿದ್ದು, ಆತನ ಮೃತದೇಹವನ್ನು ವಾಪಸ್ ಕೊಡಲಾಗುವುದಿಲ್ಲ ಎಂದು ಗೃಹ ಸಚಿವಾಲಯ ಸೋಮವಾರ ಹೇಳಿತ್ತು.
ಇದೀಗ ಪ್ರಧಾನಿ ಸಿಂಗ್ ಅಫ್ಜಲ್ ಮೃತದೇಹದ ಬಗ್ಗೆ ಸಂಸತ್ ತೀರ್ಮಾನಿಸಲಿ ಎಂದು ಹೇಳುವ ಮೂಲಕ ಪ್ರಸ್ತುತ ಪ್ರಕರಣದ ಬಗ್ಗೆ ಇನ್ನಷ್ಟು ಕುತೂಹಲ ಸೃಷ್ಟಿಸಿದ್ದಾರೆ.