ಕುಟುಂಬಕ್ಕಿಲ್ಲ ಅಫ್ಜಲ್ ಗುರುವಿನ ದೇಹ?
ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಿ, ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾದ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿನ ಮೃತ ..
ನವದೆಹಲಿ: ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಿ, ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾದ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿನ ಮೃತ ದೇಹವನ್ನು ತಮಗೆ ಒಪ್ಪಿಸಬೇಕು ಎಂಬ ಆತನ ಕುಟುಂಬದ ಮನವಿಯನ್ನು ಸರ್ಕಾರ ತಿರಸ್ಕರಿಸುವ ಸಾಧ್ಯತೆ ಇದೆ.
ಅಫ್ಜಲ್ ಗುರುವಿನ ದೇಹವನ್ನು ಕುಟುಂಬಕ್ಕೆ ನೀಡುವ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಮತ್ತು ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ದೇಹವನ್ನು ತಮಗೆ ನೀಡಬೇಕು ಎಂದು ಅಫ್ಜಲ್ ಪತ್ನಿ ತಬಸ್ಸುಮ್ ಅವರು ಸಲ್ಲಿಸಿದ್ದ ಮನವಿ ಪತ್ರವನ್ನು ಕಾಶ್ಮೀರ ಸರ್ಕಾರ ಕೇಂದ್ರಕ್ಕೆ ರವಾನಿಸಿದೆ. ಆದರೆ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹಾಗೂ ಇತರೆ ಕಾರಣಗಳಿಂದ ದೇಹವನ್ನು ಕುಟಂಬಕ್ಕೆ ನೀಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
2001ರ ಸಂಸತ್ ದಾಳಿಯ ಪ್ರಮುಖ ಅಪರಾಧಿಯಾಗಿದ್ದ ಅಫ್ಜಲ್ ಗುರುವನ್ನು ಫೆಬ್ರವರಿ 9ರಂದು ಗಲ್ಲಿಗೇರಿಸಲಾಗಿತ್ತು.