ಸಂಸತ್ತಿನಲ್ಲಿ ಕಾಪ್ಟರ್ ಹಗರಣದ ಚರ್ಚೆಗೆ ಸಿದ್ಧ: ಪ್ರಧಾನಿ
ವಿವಾದಿತ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿರುವ ಪ್ರಧಾನಮಂತ್ರಿ ..
ನವದೆಹಲಿ: ವಿವಾದಿತ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಹಗರಣದ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧ ಎಂದು ಸೋಮವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಕಾಪ್ಟರ್ ಹಗರಣವನ್ನು ರೈಸ್ ಮಾಡುವ ಪ್ರತಿಪಕ್ಷಗಳ ಬೆದರಿಕೆಗೆ ಇಂದು ತೀರುಗೇಟು ನೀಡಿರುವ ಪ್ರಧಾನಿ ಸಿಂಗ್, 12 ಅಗಸ್ಟವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿಗೆ ಸಂಬಂಧಿಸಿದಂತೆ ನಾವು ಯಾವುದೇ ವಿಷಯವನ್ನು ಮುಚ್ಚಿಟ್ಟಿಲ್ಲ. ಎಲ್ಲವನ್ನೂ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧ ಎಂದರು.
ಪ್ರಕರಣದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಕಾಪ್ಟರ್ ಖರೀದಿ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ ಮತ್ತು ಅದನ್ನು ರದ್ದುಗೊಳಿಸುವ ಪ್ರಕ್ರಿಯೆಗೂ ಭಾರತ ಸರ್ಕಾರ ಚಾಲನೆ ನೀಡಿದೆ.
ಈ ಮಧ್ಯೆ, ಪ್ರಕರಣದ ತನಿಖೆ ಆರಂಭಿಸಿರುವ ಸಿಬಿಐ, ತನ್ನ ತನಿಖಾ ಅಧಿಕಾರಿಗಳ ತಂಡವನ್ನು ನಾಳೆ ಇಟಲಿಗೆ ಕಳುಹಿಸಲಿದೆ.